ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಎಡಿಜೆ ಅತ್ಯಾಚಾರ ಮತ್ತು ಪೋಕ್ಸೋ (POCSO) ವಿಶೇಷ ನ್ಯಾಯಾಲಯವು ಜ್ಯೋತಿಷ್ ಪೀಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಮತ್ತು ಅವರ ಶಿಷ್ಯ ಮುಕುಂದಾನಂದ ಗಿರಿ ವಿರುದ್ಧ ಗಂಭೀರ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ.
ನ್ಯಾಯಾಧೀಶ ವಿನೋದ್ ಕುಮಾರ್ ಚೌರಾಸಿಯಾ ಅವರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸುವಂತೆ ಜೋನ್ಸಿ ಪೊಲೀಸ್ ಠಾಣೆಗೆ ಆದೇಶಿಸಿದ್ದಾರೆ.
ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಶಕುಂಭರಿ ಪೀಠಾಧೀಶ್ವರ ಅಶುತೋಷ್ ಬ್ರಹ್ಮಚಾರಿ ಮಹಾರಾಜ್ ಅವರು ಜನವರಿ 28ರಂದು ಸೆಕ್ಷನ್ 173(4) ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಸಿದ ಅರ್ಜಿಯ ಬಳಿಕ ಈ ಪ್ರಕರಣ ಗಮನ ಸೆಳೆದಿತ್ತು. ವಾರಾಣಸಿಯ ವಿದ್ಯಾಮಠದಲ್ಲಿ 'ಗುರು ಸೇವೆ'ಯ ಸೋಗಿನಲ್ಲಿ ಅವಿಮುಕ್ತೇಶ್ವರಾನಂದ ಸ್ವಾಮಿಯ ಆಶ್ರಮವು ಗುರುಕುಲದಲ್ಲಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ನಡೆಸುತ್ತಿದೆ ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಅವರು ಅದಕ್ಕೆ ಸಾಕ್ಷ್ಯವಾಗಿ ಸಿಡಿಯನ್ನು ಸಲ್ಲಿಸಿದ್ದರು. ತಮ್ಮನ್ನು ಸಂಪರ್ಕಿಸಿದ್ದ ಸ್ವಾಮೀಜಿಯಿಂದ ಕಿರುಕುಳಕ್ಕೆ ಒಳಗಾದ ಸುಮಾರು 20 ಮಕ್ಕಳ ಬಗ್ಗೆ ಅದರಲ್ಲಿ ನಮೂದಿಸಿದ್ದರು. ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಫೆಬ್ರವರಿ 13ರಂದು, ನ್ಯಾಯಾಲಯವು ಇಬ್ಬರು ಅಪ್ರಾಪ್ತ ಬಾಲಕರಿಂದ ವೀಡಿಯೊ-ಗ್ರಾಫ್ ಮಾಡಿದ ಹೇಳಿಕೆಗಳನ್ನು ದಾಖಲಿಸಿತ್ತು. ಪೊಲೀಸ್ ವರದಿಯ ಜೊತೆಗೆ ಈ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ನ್ಯಾಯಾಧೀಶರು ಎಫ್‌ಐಆರ್ ದಾಖಲಿಸುವ ನಿರ್ದೇಶನವನ್ನು ನೀಡುವ ಮೊದಲು ತೀರ್ಪನ್ನು ಕಾಯ್ದಿರಿಸಿದ್ದರು. ಇದೀಗ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸಲು ಆದೇಶ ನೀಡಲಾಗಿದೆ.
ದೂರುದಾರ ಆಶುತೋಷ್ ಬ್ರಹ್ಮಚಾರಿ ಈ ತೀರ್ಪನ್ನು ದೈವಿಕ ನ್ಯಾಯವೆಂದು ಶ್ಲಾಘಿಸಿದ್ದಾರೆ. ಜನರಿಗೆ ಸತ್ಯವನ್ನು ಬಹಿರಂಗಪಡಿಸಲು ಪ್ರಯಾಗರಾಜ್‌ನಿಂದ ವಿದ್ಯಾಮಠ ವಾರಾಣಸಿಗೆ ಪಾದಯಾತ್ರೆಯನ್ನು ನಡೆಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ. ಸ್ವಾಮೀಜಿಯ ಬಣವು ಈ ಆರೋಪಗಳನ್ನು ಅವರ ಗೋಸಂರಕ್ಷಣಾ ಕಾರ್ಯವನ್ನು ಹಳಿತಪ್ಪಿಸಲು ರೂಪಿಸಲಾದ ಆರೋಪಗಳೆಂದು ತಳ್ಳಿಹಾಕಿದೆ. ಆದರೆ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

