ಪೆರ್ಲ: ಇತರ ರಾಜ್ಯಗಳಿಂದ ಕೇರಳಕ್ಕೆ ವಾಹನಗಳ ಮೂಲಕ ಸಾಗಿಸುವ ಕೋಳಿ, ಜಾನುವಾರುಗಳ ತಪಾಸಣೆ ನಡೆಸುವ ನಿಟ್ಟಿನಲ್ಲಿ ಪೆರ್ಲದಲ್ಲಿ ಆರಂಭಗೊಂಡಿರುವ ಜಾನುವಾರು ರೋಗ ನಿಯಂತ್ರಣ(ಎಲ್‍ಡಿಸಿ)ಚೆಕ್‍ಪೋಸ್ಟ್‍ಗೆ ಇಪ್ಪತ್ತು ವರ್ಷಗಳ ನಂತರ ಸ್ಯಾಟಲೈಟ್ ಕಂಟೈನರ್ ಕಚೇರಿ ಲಭ್ಯವಾಗಿದೆ. ಪೆರ್ಲ ಆರ್‍ಟಿಓ ಚೆಕ್‍ಪೋಸ್ಟ್ ಸನಿಹ ಖಾಸಗಿವ್ಯಕ್ತಿಯೊಬ್ಬರ ಸಣ್ಣ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಎಲ್‍ಡಿಸಿ ಚೆಕ್ ಪೋಸ್ಟ್‍ಗೆ ಕೊನೆಗೂ ಸ್ವಂತ ಕಚೇರಿ ಲಭ್ಯವಾಗಿದ್ದರೂ, ಇಲ್ಲೂ ಸ್ಥಳಾವಕಾಶದ ಕೊರತೆ ಕಾಡುತ್ತಿದೆ.
ರಾಜ್ಯ ಪಶು ಸಂಗೋಪನೆ ಮತ್ತು ಕ್ಷೀರಾಭಿವೃದ್ಧಿ ಇಲಾಖೆ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ಎಲ್‍ಡಿಸಿ ಚೆಕ್‍ಪೋಸ್ಟ್ ಮೂಲಕ ವಾಹನಗಳಲ್ಲಿ ರಾಜ್ಯಕ್ಕೆ ತರಲಾಗುತ್ತಿರುವ ಕೋಳಿ, ಜಾನುವಾರುಗಳನ್ನು ತಪಾಸಣೆ ನಡೆಸಿ, ಅವುಗಳಿಗೆ ರೋಗಬಾಧೆ ಇಲ್ಲ ಎಂಬುದನ್ನು ಖಚಿತಪಡಿಸುವುದು ಚೆಕ್‍ಪೋಸ್ಟ್‍ಗಳ ಪ್ರಮುಖ ಚಟುವಟಿಕೆಯಾಗಿದೆ.
ಜಿಲ್ಲೆಯಲ್ಲಿ ತಲಪ್ಪಾಡಿ, ಚೆರ್ವತ್ತೂರು ಹಾಗೂ ಪೆರ್ಲದಲ್ಲಿಮಾತ್ರ ಎಲ್‍ಡಿಸಿ ಚೆಕ್‍ಪೋಸ್ಟ್ ಚಟುವಟಿಕೆ ನಡೆಸುತ್ತಿದೆ. ಕೋಳಿ, ಜಾನುವಾರುಗಳನ್ನು ಸಮಗ್ರ ತಪಾಸಣೆಗೊಳಪಡಿಸಿದ ನಂತರವೇ ರಾಜ್ಯದೊಳಗೆ ಬಿಟ್ಟುಕೊಡಬೇಕೆಂಬ ನಿಬಂಧನೆಯಿದ್ದರೂ, ಇವು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿದೆ. ಪ್ರಸಕ್ತ ಐವರು ಲೈವ್‍ಸ್ಟಾಕ್ ಇನ್ಸ್‍ಪೆಕ್ಟರ್ ಹಾಗೂ ಒಬ್ಬ ಅಟೆಂಡರ್ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಪಾಸಣೆ ನಡೆಸಿದ ನಂತರ ಕಸಾಯಿಖಾನೆಗಳಿಗೆ ಸಾಗಾಟ ನಡೆಸುವ ಜಾನುವಾರುಗಳಕಿವಿಗೆ ಕೆಂಪು ಹಾಗೂ ಸಾಕಣಿಕೆಗಾಗಿ ಸಾಗಿಸುವವರುಗಳಿಗೆ ಹಳದಿ ಟ್ಯಾಗ್‍ಗಳನ್ನು ಅಳವಡಿಸಲಾಗುತ್ತದೆ. ರೋಗ ಪತ್ತೆಯಾದಲ್ಲಿ ಇಂತಹ ಜಾನುವಾರುಗಳನ್ನು ತಡೆದು, ಅವುಗಳರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‍ಗೆ ತಪಾಸಣೆಗೆ ಕಳುಹಿಸಿಕೊಡುವುದು ಸಿಬ್ಬಂದಿ ಕರ್ತವ್ಯವಾಗಿದೆ. ಇನ್ನು ಇತರ ರಾಜ್ಯಗಳಿಂದ ತರಲಾಗುವ ಹಾಲನ್ನು ಸೂಕ್ತ ಶೀಥಲೀಕೃತ ವ್ಯವಸ್ಥೆಯಲ್ಲಿ ಸಾಗಿಸಲಾಗುತ್ತಿರುವ ಬಗ್ಗೆಯೂ ಖಚಿತಪಡಿಸುವುದರ ಜತೆಗೆ ಹಾಲಿನ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತದೆ. ಇತರ ರಾಜ್ಯಗಳಿಂದ ಚೆಕ್‍ಪೋಸ್ಟ್ ಮೂಲಕ ವಾಹನಗಳಲ್ಲಿ ಸಾಗಿಸುವ ಕೋಳಿಗೊಬ್ಬರ, ಆಡುಗೊಬ್ಬರದ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸುವುದೂ ಸಿಬ್ಬಂದಿ ಕರ್ತವ್ಯವಾಗಿದೆ.
ರಕ್ಷಣೆ ಕೊರತೆ:
ಎಲ್‍ಡಿಸಿ ಚೆಕ್‍ಪೋಸ್ಟ್ ದಿನದ 24ತಾಸು ಕಾಲ ಚಟುವಟಿಕೆ ನಡೆಸುತ್ತಿರುವುದರಿಂದ ರಾತ್ರಿ ವೇಳೆ ಸಿಬ್ಬಂದಿ ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲ್ಲಿ ವಾಹನ ತಡೆದು ನಿಲ್ಲಿಸಲು ಗೇಟಿನ ವ್ಯವಸ್ಥೆಯೂ ಇಲ್ಲ. ಕೆಲವೊಂದು ವಾಹನಗಳಿಗೆ ಸೂಚನೆ ನೀಡಿದರೂ, ಅತಿಯಾದ ವೇಗದಿಂದ ಧಾವಿಸುತ್ತಿರುವುದರಿಂದ ವಾಹನಗಳ ಗುರುತು ಪತ್ತೆಯೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆಪೊಲೀಸರಿಗೆ ಮಾಹಿತಿ ನೀಡಿದರೂ, ಸಕಾಲಕ್ಕೆ ಸ್ಪಂದನೆ ಲಬಿಸದ ಸ್ಥಿತಿಯಿದೆ. ಇದರಿಂದ ಸ್ಥಳದಲ್ಲಿ ರಾತ್ರಿ ವೇಳೆ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಏರ್ಪಡಿಸುವಂತೆ ಇಲ್ಲಿನ ಸಿಬ್ಬಂದಿ ಆಗ್ರಹಿಸಿದ್ದಾರೆ.
ಇಂದು ಉದ್ಗಾಟನೆ:
ಸ್ಯಾಟಲೈಟ್ ಕಂಟೈನರ್ ಕಚೇರಿಯ ಉದ್ಘಾಟನೆಯನ್ನು ಫೆ. 19ರಂದು ಬೆಳಗ್ಗೆ 10ಕ್ಕೆ ರಾಜ್ಯ ಪಶುಸಂಗೋಪನೆ-ಕ್ಷೀರಾಭಿವೃದ್ಧಿ ಖಾತೆ ಸಚಿವೆ ಜೆ. ಚಿಂಚುರಾಣಿ ನಿರ್ವಹಿಸುವರು. ನಂತರ ಎಣ್ಮಕಜೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ನಡೆಯುವ ಕಾರ್ಯಾಗಾರವನ್ನು ಕಾಸರಗೋಡು ಜಿಪಂ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸುವರು.
ಅಭಿಮತ:
ಚೆಕ್ ಪೊಸ್ಟ್ ಆರಂಭಗೊಂಡ ದೀರ್ಘ ಕಾಲದ ನಂತರ ಸ್ಯಾಟಲೈಟ್ ಕಂಟೈನರ್ ಕಚೇರಿ ಲಭ್ಯವಾಗಿದೆ. ಕಚೇರಿಯಲ್ಲಿ ಸ್ಥಳಾವಕಾಶದ ಕೊರತೆಯಿರುವುದರಿಂದ ಸಿಬ್ಬಂದಿಗೆ ವಸತಿ ವ್ಯಸ್ಥೆ ಸನಿಹದಲ್ಲೇ ಲಭ್ಯವಾಗಿ ಸಿಕ್ಕಿದಲ್ಲಿ 24ತಸುಗಳ ಕಾಲ ಕರ್ತವ್ಯಕ್ಕೆ ಸಹಕಾರಿಯಾಗಲಿದೆ.ಆರ್‍ಟಿಓ ಚೆಕ್‍ಪೋಸ್ಟ್‍ನ ಗೇಟ್ ಇರುವುದರಿಂದ ಎಲ್‍ಡಿಸಿ ಚೆಕ್‍ಪೊಸ್ಟ್ ಮತ್ತಷ್ಟು ಕರ್ಯಕ್ಷಮತೆಯೊಂದಿಗೆ ಚಟುವಟಿಕೆ ನಡೆಸಲು ಸಾಧ್ಯವಾಗಲಿದೆ.
ಸುನಿಲ್ ಕುಮಾರ್, ಕ್ಷೇತ್ರಾಧಿಕಾರಿ
ಎಲ್‍ಡಿಸಿ ಚೆಕ್‍ಪೋಸ್ಟ್, ಪೆರ್ಲ



