ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಉಕ್ಕಿನಡ್ಕ ಸನಿಹ ರಸ್ತೆಯಲ್ಲಿಉಂಟಾಗಿರುವ ಹೊಂಡಗಳಿಗೆ ಶಾಪಮೋಕ್ಷದ ದಿನ ಸಮೀಪಿಸುತ್ತಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ವಾಹನಚಾಲಕರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿಹಿಡಿದು ಸಂಚರಿಸಬೇಕಾದ ಸ್ಥಿತಿ ದೂರಾಗುವ ದಿನ ಸಮೀಪಿಸಿದೆ. ರಸ್ತೆ ಅಭಿವೃದ್ಧಿಗೆ ಕೊನೆಗೂ ಸರ್ಕಾರ 'ಕಿಫ್‍ಬಿ'ಮೂಲಕ 30.36ಕೋಟಿ ರೂ. ಮಂಜೂರುಗೊಳಿಸಿದ್ದು, ಕಾಮಗಾರಿಗೆ ಹಸಿರು ನಿಶಾನಿ ತೋರಿಸಿದೆ.
ಚೆರ್ಕಳದಿಂದ-ಉಕ್ಕಿನಡ್ಕ ವರೆಗಿನ ಹೊಂಡಮಯ ರಸ್ತೆಯನ್ನು ದುರಸ್ತಿನಡೆಸುವಂತೆ ನಾಗರಿಕರು ನಡೆಸಿದ ಹೋರಾಟಕ್ಕೆ ಈಮೂಲಕ ನ್ಯಾಯ ಲಭಿಸಿದಂತಾಗಿದೆ. ಕೇರಳ-ಕರ್ನಾಟಕ ಅಂತಾರಾಜ್ಯ ಸಂಪರ್ಕದ ಚೆರ್ಕಳ-ಕಲ್ಲಡ್ಕ ರಸ್ತೆ ಶೋಚನೀಯಾವಸ್ಥೆ ಪರಿಹರಿಸುವಂತೆ ಜನತೆ ಸರ್ಕಾರವನ್ನು ದೀರ್ಘ ಕಾಲದಿಂದ ಅಗ್ರಹಿಸುತ್ತಾ ಬಂದಿದ್ದರೂ, ಸರ್ಕಾರ ಕನ್ಣು ತೆರೆದಿರಲಿಲ್ಲ. ಇದರ ಪರಿಣಾಮ ಅಂತಾರಾಜ್ಯ ಸಂಪರ್ಕದ ರಸ್ತೆಯೊಂದು ಅತ್ಯಂತ ಶಿಥಿಲಾವಸ್ಥೆ ತಲುಪುವಂತಾಗಿತ್ತು.
ಚೆರ್ಕಳ-ಕಲ್ಲಡ್ಕ ಅಂತಾರಾಜ್ಯ ರಸ್ತೆ ಕಳೆದ ಎರಡು ವರ್ಷಗಳಿಂದ ಘನವಾಹನಗಳ ಸಂಚಾರದಿಂದ ಅತ್ಯಂತ ಶಿಥಿಲಾವಸ್ಥೆಯತ್ತ ಸಾಗುತ್ತಿದೆ. ಕಾಸರಗೋಡು, ಕಾಞಂಗಾಡು ಭಾಗಕ್ಕೆ ಭಾರಿ ಪ್ರಮಾಣದಲ್ಲಿ ಕಗ್ಗಲ್ಲು, ಜಲ್ಲಿಕಲ್ಲು, ಎಂಸ್ಯಾಂಡ್, ಮರಳು ಸೇರಿದಂತೆ ಖನಿಜಗಳ ವ್ಯಾಪಕ ರವಾನೆಯಿಂದ ರಸ್ತೆ ಹೆಚ್ಚು ಶಿಥಿಲಗೊಳ್ಳಲು ಕಾರಣವಾಗುತ್ತಿರುವುದಾಗಿ ವ್ಯಾಪಕ ದೂರೆದ್ದಿದೆ.
ಈ ಹಿಂದೆ ಸುಮಾರು 40ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಲು ಸರ್ಕಾರ ಮುಂದಾಗುತ್ತಿದ್ದಂತೆ ನಾಗರಿಕರು ಎಚ್ಚೆತ್ತು ಇದಕ್ಕೆ ತಮ್ಮ ವಿರೋಧ ಸೂಚಿಸಿದ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ 30.36ಕೋಟಿ ರೂ. ಮೀಸಲಿರಿಸುವ ಮೂಲಕ ರಸ್ತೆ ಅಭಿವೃದ್ಧಿಯ ಕನಸು ಮತ್ತೆ ಚಿಗುರೊಡೆಯುವಂತಾಗಿದೆ. ಚೆರ್ಕಳದಿಂದ ಬದಿಯಡ್ಕ ವರೆಗೆ ಬೃಹತ್ ಹೊಂಡಗಳಿಗೆ ತೇಪೆ ಹಚ್ಚುವ ಕಾತರ್ಯ ನಡೆದಿದ್ದರೂ,ಅ ಲ್ಲಿಂದ ಮುಂದೆ ಉಕ್ಕಿನಡ್ಕ ವರೆಗೆ ರಸ್ತೆ ಸ್ಥಿತಿ ಅಯೋಮಯವಾಗಿದೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಖಾಸಗಿ ಬಸ್ ಮಾಲಿಕರು ಮತ್ತು ಕಾರ್ಮಿಕರು ಒಂದು ದಿನದ ಸಾಂಕೇತಿಕ ಹರತಾಳವನ್ನೂ ಕೈಗೊಂಡಿದ್ದರು. ಉಕ್ಕಿನಡ್ಕದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಂಚರಿಸಲಿರುವ ಪ್ರಮುಖ ರಸ್ತೆ ಇದಾಗಿದ್ದು, ಶಿಥಿಲ ರಸ್ತೆಯಲ್ಲಿನ ಪ್ರಯಾಣ ಚಾಲಕರು ಹಾಗೂ ಜನರಲ್ಲಿ ವ್ಯಾಪಕ ಸಮಸ್ಯೆ ಹುಟ್ಟುಹಾಕಿದೆ.
ಸೇತುವೆಯೂ ಶಿಥಿಲ:
ರಸ್ತೆ ಕಾಮಗಾರಿ ನಡೆದರೂ, ಪಳ್ಳತ್ತಡ್ಕದ ಸೇತುವೆ ದುರಸ್ತಿ ಯಾ ಮರು ನಿರ್ಮಾಣದ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪಳ್ಳತ್ತಡ್ಕ ಸೇತುವೆ ದುರ್ಬಲಗೊಂಡಿದ್ದು, ತಳಭಾಗದ ಕಾಂಕ್ರೀಟ್ ಚಪ್ಪಡಿ ಕಿತ್ತು ಬೀಳುತ್ತಿದೆ. ಸೇತುವೆ ಶಿಥಿಲಾವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎರಡೂ ಕಡೆ ಸೂಚನಾಫಲಕ ಅಳವಡಿಸಿದ್ದು, ಘನ ವಾಸಹನಗಳ ಸಂಚಾರದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.ಆದರೆ, ಅತಿಯಾದ ಭಾರ ಹೇರಿಕೊಂಡು ಸಾಗುತ್ತಿರುವ ಘನವಾಹನಗಳ ಸಂಚಾರಕ್ಕೆ ತಡೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗದಿರುವುದು ವಿಪರ್ಯಾಸ.



