ಮುಂಬೈ: ಖಂಡಾಲಾ ಘಾಟ್ ವಿಭಾಗದಲ್ಲಿ ಪ್ರೊಪಿಲೀನ್ ಅನಿಲವನ್ನು ಹೊತ್ತ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸ್ಥಗಿತಗೊಂಡಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಮುಂಬೈಗೆ ಸಾಗುವ ಮಾರ್ಗದ ಸಂಚಾರವನ್ನು 33 ಗಂಟೆಗಳ ಬಳಿಕ ಗುರುವಾರ ಮುಂಜಾನೆ ಪುನರಾರಂಭಿಸಲಾಯಿತು ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಎಂಎಸ್‌ಆರ್‌ಡಿಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಅದೋಶಿ ಸುರಂಗದ ಸಮೀಪ ಮಂಗಳವಾರ ಸಂಜೆ ಸಂಭವಿಸಿದ್ದ ಅಪಘಾತದ ನಂತರ ಟ್ಯಾಂಕರ್‌ನಲ್ಲಿದ್ದ ಅನಿಲವನ್ನು ಬುಧವಾರ ತಡರಾತ್ರಿ ಬೇರೆ ಟ್ಯಾಂಕರ್‌ಗಳಿಗೆ ಸುರಕ್ಷಿತವಾಗಿ ವರ್ಗಾಯಿಸಲಾಯಿತು. ಬಳಿಕ ಹೆವಿ ಡ್ಯೂಟಿ ಕ್ರೇನ್‌ಗಳ ಸಹಾಯದಿಂದ ಪಲ್ಟಿಯಾದ ವಾಹನವನ್ನು ತೆರವುಗೊಳಿಸಿದ ನಂತರ ಬೆಳಿಗಿನ ಜಾವ 1.46ರ ಸುಮಾರಿಗೆ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಟ್ಯಾಂಕರ್ ಪಲ್ಟಿಯಾದ ಪರಿಣಾಮ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿ ಸಾವಿರಾರು ವಾಹನಗಳು ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ವಾಹನಗಳ ಸಾಲು ಸುಮಾರು 20 ಕಿ.ಮೀ.ವರೆಗೆ ವಿಸ್ತರಿಸಿತ್ತು. ಮಹಿಳೆಯರು ಮತ್ತು ಮಕ್ಕಳು ಸೇರಿ ಅನೇಕ ಪ್ರಯಾಣಿಕರು ಆಹಾರ, ನೀರು ಹಾಗೂ ಶೌಚಾಲಯ ಸೌಲಭ್ಯಗಳಿಲ್ಲದೆ ಸಂಕಷ್ಟ ಅನುಭವಿಸಿದರು.
ಅಪಘಾತದ ಬಳಿಕ ಮುಂಬೈಗೆ ಸಾಗುವ ಕ್ಯಾರೇಜ್ ವೇಯನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಪುಣೆಗೆ ಸಾಗುವ ಮಾರ್ಗದಲ್ಲಿ ಹಂತ ಹಂತವಾಗಿ ವಾಹನ ಸಂಚಾರವನ್ನು ಬೇರೆಡೆಗೆ ತಿರುಗಿಸಿ ನಿಯಂತ್ರಿಸಲಾಗಿತ್ತು. ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಎಂಎಸ್‌ಆರ್‌ಡಿಸಿ ತಾತ್ಕಾಲಿಕವಾಗಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿತ್ತು.
ಪರಿಸ್ಥಿತಿಯನ್ನು ನಿಯಂತ್ರಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹೆದ್ದಾರಿ ಪೊಲೀಸರು ಹಾಗೂ ಎಂಎಸ್‌ಆರ್‌ಡಿಸಿ ಸಿಬ್ಬಂದಿ ಜಂಟಿಯಾಗಿ ತೆರವು ಕಾರ್ಯಾಚರಣೆ ನಡೆಸಿದರು.
ಖಂಡಾಲಾ ಘಾಟ್‌ವಿಭಾಗದಲ್ಲಿ ಸಂಚಾರ ಕ್ರಮೇಣ ಸಾಮಾನ್ಯಗೊಂಡಿದ್ದರೂ ಗುರುವಾರ ಬೆಳಿಗ್ಗೆ ಅಮೃತಾಂಜನ್ ಸೇತುವೆ ಸಮೀಪ ಕೆಲವು ಭಾರೀ ವಾಹನಗಳು ಸ್ಥಗಿತಗೊಂಡ ಕಾರಣ ಸ್ವಲ್ಪ ಕಾಲ ಸಂಚಾರ ನಿಧಾನಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ದೀರ್ಘಕಾಲದ ಅಡಚಣೆಯಿಂದ ಸಾರ್ವಜನಿಕ ಸಾರಿಗೆ ಮೇಲೂ ಪರಿಣಾಮ ಬೀರಿದ್ದು, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್‌ಆರ್‌ಟಿಸಿ) ಅನೇಕ ಬಸ್‌ಗಳು ಮಾರ್ಗ ಮಧ್ಯೆ ಸಿಲುಕಿಕೊಂಡು ಹಲವು ನಿಯಮಿತ ಸೇವೆಗಳು ರದ್ದಾಗಿದ್ದವು. ಹಾಲು ಮತ್ತು ತರಕಾರಿಗಳಂತಹ ಅಗತ್ಯ ವಸ್ತುಗಳ ಸರಬರಾಜಿಗೂ ವ್ಯತ್ಯಯ ಉಂಟಾಯಿತು.

