ಟೊರಾಂಟೊ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಟಂಬ್ಲರ್ ರಿಡ್ಜ್ ನಗರದಲ್ಲಿರುವ 'ಟಂಬ್ಲರ್ ರಿಡ್ಜ್ ಹೈಸ್ಕೂಲ್'ಗೆ ಮಹಿಳೆಯೊಬ್ಬರು ನುಗ್ಗಿ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಇದೇ ವೇಳೆ, ಶಾಲೆ ಹತ್ತಿರದ ಮನೆಯೊಂದರಲ್ಲಿ ಎರಡು ಶವಗಳು ಪತ್ತೆಯಾಗಿವೆ.
ಎರಡೂ ಘಟನೆ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದು, 27 ಮಂದಿಗೆ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. 'ಈ ಎರಡೂ ಘಟನೆಗಳಿಗೂ ಸಂಬಂಧವಿದೆ' ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಎಷ್ಟು ಮಂದಿ ವಿದ್ಯಾರ್ಥಿಗಳು ಇದ್ದಾರೆ ಎಂಬ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
'ಮಹಿಳೆಯ ಗುರುತು ಪತ್ತೆಯಾಗಿದೆ. ಈ ಕೃತ್ಯದ ಹಿಂದಿನ ಕಾರಣ ತಿಳಿದುಬಂದಿಲ್ಲ. ಆದ್ದರಿಂದ, ಮಹಿಳೆಯ ಗುರುತು ಬಹಿರಂಗ ಮಾಡುವುದಿಲ್ಲ' ಎಂದು ಪೊಲೀಸರು ಹೇಳಿದ್ದಾರೆ. ಕೆನಡಾದಲ್ಲಿ ಶಾಲೆಯ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ನಡೆದಿಲ್ಲ. 7ರಿಂದ 12ನೇ ತರಗತಿಯ 160 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ.
ಶವವಾಗಿ ಪತ್ತೆಯಾದ ಮಹಿಳೆ:
ಘಟನೆ ಕುರಿತು ಮಾಹಿತಿ ಬಂದ ಎರಡು ನಿಮಿಷಗಳಲ್ಲಿ ಪೊಲೀಸರು ಶಾಲೆಗೆ ತಲುಪಿದ್ದಾರೆ. 'ಶಾಲೆಯಲ್ಲಿ ಆರು ಶವಗಳು ಪತ್ತೆಯಾಗಿವೆ. ಜೊತೆಗೆ, ಗುಂಡಿನ ದಾಳಿ ನಡೆಸಿದ ಮಹಿಳೆಯ ಶವವೂ ಪತ್ತೆಯಾಗಿದೆ. ಆಕೆ ಸ್ವಯಂ ಗುಂಡು ಹಾರಿಸಿಕೊಂಡಿರುವ ಸಾಧ್ಯತೆಯಿದೆ. ಘಟನೆಗೆ ಸಂಬಂಧಿಸಿ ಬೇರೆ ಯಾರ ಮೇಲೆಯೂ ಅನುಮಾನವಿಲ್ಲ' ಎಂದು ಪೊಲೀಸರು ಮಾಹಿತಿ ನೀಡಿದರು.
'ಮಹಿಳೆಯಿಂದ ಕೃತ್ಯ:
ಇದೇ ಮೊದಲು' 'ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸುವಂಥ ಘಟನೆಗಳು ನೆರೆಯ ಅಮೆರಿಕದಲ್ಲಿ ಪದೇ ಪದೇ ನಡೆಯುತ್ತಲೇ ಇರುತ್ತವೆ. ಕೆನಡಾದಲ್ಲಿ ಬಂದೂಕು ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿ ಕಠಿಣ ಕಾನೂನುಗಳಿವೆ. ಆದ್ದರಿಂದ ಇಲ್ಲಿ ಇಂಥ ಘಟನೆಗಳು ವಿರಳ. ಮಹಿಳೆಯೊಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ದೇಶದಲ್ಲಿ ನಡೆದೇ ಇಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.
ಏನು ನಡೆಯುತ್ತಿದೆ ಎಂಬುದು ಆರಂಭದಲ್ಲಿ ನಮಗೆ ತಿಳಿಯಲಿಲ್ಲ. ಬಳಿಕ ಗುಂಡಿನ ದಾಳಿಯ ದೃಶ್ಯಗಳಿರುವ ಫೋಟೊಗಳು ನಮ್ಮ ಮೊಬೈಲ್‌ಗೆ ಬರತೊಡಗಿದವು. ತಕ್ಷಣವೇ ನಾವು ನಮ್ಮ ಕೊಠಡಿಯ ಬಾಗಿಲಿಗೆ ಅಡ್ಡಲಾಗಿ ಬ್ಯಾರಿಕೇಡ್ ರೀತಿಯಲ್ಲಿ ಟೇಬಲ್‌ಗಳನ್ನು ಜೋಡಿಸಿಟ್ಟಿದ್ದೆವು. ಎರಡು ತಾಸುಗಳ ಬಳಿಕ ಪೊಲೀಸರು ನಮ್ಮನ್ನು ಕೊಠಡಿಯಿಂದ ಹೊರಗೆ ಕರೆತಂದರು -ಡ್ಯಾರಿಯನ್ ಕ್ವಿಸ್ಟ್ 12ನೇ ತರಗತಿ ವಿದ್ಯಾರ್ಥಿ'ಬಾಗಿಲಿಗೆ ಟೇಬಲ್ ಜೋಡಿಸಿಟ್ಟೆವು'

