ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು ಚೀನಾದ ಯುನಿಟ್ರೀ ಸಂಸ್ಥೆ ತಯಾರಿಸಿದ AI ಚಾಲಿತ ರೋಬೋಟಿಕ್ ನಾಯಿಯನ್ನು USD 2,800 (ಸುಮಾರು ₹2.3 ಲಕ್ಷ) ಬೆಲೆಗೆ ಮಾರಾಟ ಮಾಡಿದ್ದಾಗಿ ಹೇಳಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ವಿವಾದ ಉಂಟಾಯಿತು. ರೋಬೊಡಾಗನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನವೆಂದು ತಪ್ಪಾಗಿ ಪ್ರದರ್ಶಿಸಲಾಗಿದೆ ಎಂಬ ಆರೋಪಗಳು ಕೇಳಿಬಂದವು.
X ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹಿಂದಿನ ಹೇಳಿಕೆಯಲ್ಲಿ, ರೋಬೋಡಾಗ್ ಅನ್ನು ಯುನಿಟ್ರೀಯಿಂದ ಖರೀದಿಸಿ ಕಲಿಕೆಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿತ್ತು. ವಿದ್ಯಾರ್ಥಿಗಳು ಇದರೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ. ನಾವು ಈ ರೋಬೋಡಾಗ್ ನಿರ್ಮಿಸಿಲ್ಲ, ಹಾಗೆ ಎಂದಿಗೂ ಹೇಳಿಕೊಂಡಿಲ್ಲ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿತ್ತು.
ವಿವಾದದ ಹಿನ್ನೆಲೆ ವಿಶ್ವವಿದ್ಯಾಲಯವನ್ನು AI ಶೃಂಗಸಭೆಯಿಂದ ತಕ್ಷಣ ಸ್ಟಾಲ್ ಖಾಲಿಮಾಡಿಕೊಂಡು ತೆರಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಹೊರಬಂದಿದ್ದರೂ, ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. ಆಯೋಜಕರ ಭಾವನೆಗೆ ಗೌರವ ಸೂಚಿಸಿ ಆವರಣವನ್ನು ಖಾಲಿ ಮಾಡಿರುವುದಾಗಿ ಅದು ತಿಳಿಸಿದೆ. ವಿವಾದ ಹೆಚ್ಚುತ್ತಿದ್ದಂತೆ, AI ಶೃಂಗಸಭೆಯಲ್ಲಿ ಪ್ರದರ್ಶಕರು ತಮ್ಮದಲ್ಲದ ಉತ್ಪನ್ನಗಳನ್ನು ಪ್ರದರ್ಶಿಸಬಾರದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

