ಅನೇಕ ರೆಸ್ಟೋರಂಟ್‌ಗಳು ತಮ್ಮ ನಿಜವಾದ ಆದಾಯವನ್ನು ಮರೆಮಾಚಲು ಬಿಲ್ಲಿಂಗ್ ಸಾಫ್ಟ್‌ವೇರ್‌ನಲ್ಲಿ ತಿದ್ದುಪಡಿ ಮಾಡಿ 13,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಿಲ್‌ಗಳನ್ನು ಅಳಿಸಿ ಹಾಕಿರುವುದು ಪತ್ತೆಯಾಗಿದೆ.
ಅನೇಕ ರೆಸ್ಟೋರಂಟ್‌ಗಳು ಹೆಚ್ಚಿನ ಹಣವನ್ನು ಸಂಪಾದಿಸುತ್ತಿದ್ದರೂ ಕಡಿಮೆ ಆದಾಯವನ್ನು ತೋರಿಸಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುತ್ತಿದ್ದವು ಎನ್ನುವುದನ್ನು ಪೋಲಿಸರು ಕಂಡುಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 70,000 ಕೋಟಿ ರೂ.ಗಳ ತೆರಿಗೆ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.
ಬಿಲ್‌ಗಳನ್ನು ಮಾಡಲು ರೆಸ್ಟೋರಂಟ್‌ಗಳು ಬಳಸುವ ಬೃಹತ್ ಕಂಪ್ಯೂಟರ್ ವ್ಯವಸ್ಥೆಯ ಅಧ್ಯಯನದಿಂದ ಈ ವಂಚನೆ ಬೆಳಕಿಗೆ ಬಂದಿದೆ. ಈ ಬಿಲ್ಲಿಂಗ್ ಸಾಫ್ಟ್‌ವೇರ್ ಅನ್ನು ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ರೆಸ್ಟೋರಂಟ್‌ಗಳು ಬಳಸುತ್ತಿವೆ. ಅಧಿಕಾರಿಗಳು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್ ಸಾಧನಗಳನ್ನು ಬಳಸಿ ಸುಮಾರು 1.77 ಲಕ್ಷ ರೆಸ್ಟೋರಂಟ್‌ಗಳ ಬಿಲ್‌ಗಳನ್ನು ಪರಿಶೀಲಿಸಿದ್ದರು ಮತ್ತು ಸುಮಾರು 60 ಟೆರಾಬೈಟ್‌ಗಳಷ್ಟು ಡೇಟಾವನ್ನು ವಿಶ್ಲೇಷಿಸಿದ್ದರು. ಈ ವೇಳೆ ಗ್ರಾಹಕರು ಹಣ ಪಾವತಿಸಿದ ಬಳಿಕ ಅನೇಕ ಬಿಲ್‌ಗಳನ್ನು ಸಿಸ್ಟಮ್‌ನಲ್ಲಿ ಸದ್ದಿಲ್ಲದೆ ಅಳಿಸಲಾಗುತ್ತಿತ್ತು ಅಥವಾ ಬದಲಿಸಲಾಗುತ್ತಿತ್ತು ಎನ್ನುವುದು ಪತ್ತೆಯಾಗಿದೆ.
ದೇಶಾದ್ಯಂತ ಈ ಸಾಫ್ಟ್‌ವೇರ್ ಬಳಸಿದ ರೆಸ್ಟೋರಂಟ್‌ಗಳು 13,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಿಲ್‌ಗಳನ್ನು ಅಳಿಸಿದ್ದವು. ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿಯೇ 5,100 ಕೋಟಿ ರೂ.ಗೂ ಹೆಚ್ಚಿನ ವ್ಯಾಪಾರವನ್ನು ಮರೆಮಾಚಲಾಗಿತ್ತು. ಡಬಲ್ ಚೆಕ್‌ಗಾಗಿ ಅಧಿಕಾರಿಗಳು 40 ರೆಸ್ಟೋರಂಟ್‌ಗಳಿಗೆ ಖುದ್ದು ಭೇಟಿಯನ್ನು ನೀಡಿದ್ದರು ಮತ್ತು ನಿಜವಾದ ವ್ಯಾಪಾರಗಳನ್ನು ಕಂಪ್ಯೂಟರ್ ದಾಖಲೆಗಳೊಂದಿಗೆ ಹೋಲಿಸಿದ್ದರು. ಈ ಸಣ್ಣ ತಪಾಸಣೆಯೂ ಸುಮಾರು 400 ಕೋಟಿ ರೂ.ಮೌಲ್ಯದ ಮಾರಾಟವನ್ನು ಮರೆಮಾಚಿದ್ದನ್ನು ಬಹಿರಂಗಗೊಳಿಸಿತ್ತು.
ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಂಚನೆ ಪತ್ತೆಯಾಗಿದೆ. ಅತ್ಯಂತ ಹೆಚ್ಚಿನ ತೆರಿಗೆ ವಂಚನೆ ಕರ್ನಾಟಕದಲ್ಲಿ ನಡೆದಿದ್ದು, ತೆಲಂಗಾಣ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಆಘಾತಕಾರಿಯಾಗಿ ಕೆಲವು ರೆಸ್ಟೋರಂಟ್‌ಗಳು ಬಿಲ್‌ಗಳನ್ನು ಅಳಿಸುವ ಗೋಜಿಗೂ ಹೋಗಿರಲಿಲ್ಲ, ಅವು ನಿಜವಾದ ಆದಾಯವನ್ನು ಬಚ್ಚಿಟ್ಟು ಕಡಿಮೆ ಆದಾಯವನ್ನೇ ತೆರಿಗೆ ಇಲಾಖೆಗೆ ತಿಳಿಸುತ್ತಿದ್ದವು.
ಈವರೆಗೆ ಪರಿಶೀಲಿಸಲಾಗಿರುವ ಮಾಹಿತಿಗಳ ಪ್ರಕಾರ ಎಲ್ಲ ರೆಸ್ಟೋರಂಟ್‌ಗಳ ಮಾರಾಟದ ಶೇ.25ರಷ್ಟನ್ನು ಮರೆಮಾಚಲಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ವಂಚನೆ ನಡೆದಿದ್ದು ಹೇಗೆ?
ಸಾಮಾನ್ಯವಾಗಿ ರೆಸ್ಟೋರಂಟ್‌ಗಳಲ್ಲಿ ಸಿಬ್ಬಂದಿಗಳು ಹಣವನ್ನು ಕದಿಯದಂತೆ ನಗದು,ಕಾರ್ಡ್ ಮತ್ತು ಯುಪಿಐ ಸೇರಿದಂತೆ ಎಲ್ಲ ಪಾವತಿಗಳನ್ನು ಬಿಲ್ಲಿಂಗ್ ಸಾಫ್ಟ್‌ವೇರ್‌ನಲ್ಲಿ ನಮೂದಿಸಲಾಗುತ್ತದೆ. ಆದರೆ ಇಲ್ಲಿ ಮಾಲಿಕರೇ ಸ್ವತಂ ಸಿಸ್ಟಮ್‌ನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ನಗದು ಹಣದ ಜಾಡನ್ನು ಕಂಡು ಹಿಡಿಯುವುದು ಕಷ್ಟವಾದ್ದರಿಂದ ನಗದು ಬಿಲ್‌ಗಳನ್ನು ಮಾತ್ರ ಅಳಿಸುವುದು ಸಾಮಾನ್ಯ ತಂತ್ರವಾಗಿದ್ದರೆ ಎಲ್ಲ ಕೆಲವು ದಿನಗಳ ಅಥವಾ ಇಡೀ ತಿಂಗಳಿನ ಬಿಲ್‌ಗಳನ್ನು ಸಂಪೂರ್ಣವಾಗಿ ಅಳಿಸಿ ನಂತರ ತೆರಿಗೆ ರಿಟರ್ನ್‌ಗಳಲ್ಲಿ ಕಡಿಮೆ ಆದಾಯವನ್ನು ತೋರಿಸುವುದು ಇನ್ನೊಂದು ವಂಚನಾ ವಿಧಾನವಾಗಿದೆ.
ಪರಿಶೀಲನೆಯು ಆರು ವರ್ಷಗಳಲ್ಲಿ ಸುಮಾರು 2.43 ಲಕ್ಷ ಕೋಟಿ ರೂ. ಮೌಲ್ಯದ ರೆಸ್ಟೋರಂಟ್ ಮಾರಾಟಗಳ ಡೇಟಾವನ್ನು ಒಳಗೊಂಡಿತ್ತು. ಅಧಿಕಾರಿಗಳು ಡಿಜಿಟಲ್ ಲ್ಯಾಬ್‌ನಿಂದ ಎಐ ಸಾಧನಗಳನ್ನು ಬಳಸಿ ರೆಸ್ಟೋರಂಟ್ ದಾಖಲೆಗಳನ್ನು ಜಿಎಸ್‌ಟಿ ನಂಬರ್‌ಗಳಂತಹ ಆನ್‌ಲೈನ್ ಮಾಹಿತಿಗಳೊಂದಿಗೆ ತಾಳೆ ಹಾಕಿದ್ದರು.
ತನಿಖೆಯು ಮೊದಲು ಹೈದರಾಬಾದ್,ವಿಶಾಖ ಪಟ್ಟಣ ಮತ್ತು ಸಮೀಪದ ಪ್ರದೇಶಗಳಲ್ಲಿ ಆರಂಭಗೊಂಡಿತ್ತು. ಇದೊಂದು ಭಾರೀ ಹಗರಣ ಎನ್ನುವುದು ಅಧಿಕಾರಿಗಳಿಗೆ ಗೊತ್ತಾದಾಗ ತನಿಖೆಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗಿತ್ತು.
ಅಧಿಕಾರಿಗಳ ಪ್ರಕಾರ ಇದು ಆರಂಭ ಮಾತ್ರ. ಇನ್ನೂ ಅನೇಕ ಬಿಲ್ಲಿಂಗ್ ಸಾಫ್ಟ್‌ವೇರ್‌ಗಳು ಅಸ್ತಿತ್ವದಲ್ಲಿದ್ದು,ಅವೂ ಮಾರಾಟವನ್ನು ಮರೆಮಾಚುತ್ತಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

