ಈ ಎನ್ಜಿಒಗಳು ತನ್ನ ಹೆಸರನ್ನೇ ಹೋಲುವ ಹೆಸರುಗಳೊಂದಿಗೆ ನೋಂದಣಿ ಮಾಡಿಕೊಂಡಿವೆ ಎಂದು ಅದು ಬೆಟ್ಟು ಮಾಡಿದೆ.
ನಿಜ ಎಂಬ ಭ್ರಮೆ ಮೂಡಿಸುವ ಇಂತಹ ಹೆಸರುಗಳ ಮುಂದುವರಿಕೆಯಿಂದ ಸಾರ್ವಜನಿಕರ ನಂಬಿಕೆ ಕುಗ್ಗಬಹುದು, ಆದೇಶದ ದುರುಪಯೋಗಕ್ಕೆ ಕಾರಣವಾಗಬಹುದು, ಹಣಕಾಸಿನ ದುರುಪಯೋಗಕ್ಕೆ ಅವಕಾಶ ಕಲ್ಪಿಸಬಹುದು ಮತ್ತು NHRCಯಂತಹ ಶಾಸನಬದ್ಧ ಸಂಸ್ಥೆ ಹಾಗೂ ಎನ್ಜಿಒಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಅಧಿಕಾರಿಗಳಿಗೆ ಗೊಂದಲ ಉಂಟುಮಾಡಬಹುದು ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆಯೂ ತನ್ನ ಹೆಸರು ಮತ್ತು ಲಾಂಛನದ ದುರುಪಯೋಗದ ಬಗ್ಗೆ ವಿವಿಧ ವೇದಿಕೆಗಳ ಮೂಲಕ ತಾನು ಕಳವಳ ವ್ಯಕ್ತಪಡಿಸಿದ್ದೆ ಹಾಗೂ ಇಂತಹ ಶಂಕಾಸ್ಪದ ಸಂಸ್ಥೆಗಳ ಹಿಂದೆ ಇರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದ್ದೆ. ಆದಾಗ್ಯೂ ಉಲ್ಲಂಘನೆಗಳು ಮುಂದುವರಿದಿವೆ ಎಂದು ಅದು ಹೇಳಿದೆ.
ಉದಾಹರಣೆಗೆ, 2022ರಲ್ಲಿ ದಿಲ್ಲಿ ಸರ್ಕಾರದೊಂದಿಗೆ ನೋಂದಣಿಯಾಗಿರುವ 'ರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿ' ಎಂಬ ಹೆಸರಿನ ಎನ್ಜಿಒ ಇತ್ತೀಚೆಗೆ ತನ್ನ ಗಮನಕ್ಕೆ ಬಂದಿದೆ. ಈ ಸಂಸ್ಥೆಗೆ ಸಂಬಂಧಿಸಿದ ವಿಸಿಟಿಂಗ್ ಕಾರ್ಡ್ನಲ್ಲಿ 'ವೆಂಕಟೇಶ್, ರಾಜ್ಯ ಅಧ್ಯಕ್ಷರು, ಕರ್ನಾಟಕ' ಎಂದು ಉಲ್ಲೇಖಿಸಲಾಗಿದೆ ಎಂದು ಆಯೋಗವು ತಿಳಿಸಿದೆ.
NHRCಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಥವಾ ಅದನ್ನೇ ಹೋಲುವ ಹೆಸರುಗಳನ್ನು ಬಳಸುತ್ತಿರುವ ಎನ್ಜಿಒಗಳು ಹಾಗೂ ಅವುಗಳ ಹಿಂದೆ ಇರುವ ವ್ಯಕ್ತಿಗಳನ್ನು ಗುರುತಿಸುವಂತೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಪಡೆದುಕೊಂಡಿರುವ ನೋಂದಣಿಗಳ ರದ್ದತಿ ಸೇರಿದಂತೆ ಎರಡು ವಾರಗಳಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ NHRC ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನೋಟಿಸ್ಗಳನ್ನು ಹೊರಡಿಸಿದೆ.
ಹೆಚ್ಚುವರಿಯಾಗಿ, ಕರ್ನಾಟಕದಲ್ಲಿ ಕಚೇರಿ ಹಾಗೂ ದಿಲ್ಲಿಯಲ್ಲಿ ನೋಂದಣಿ ಹೊಂದಿರುವ ಎನ್ಜಿಒ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಹಾಗೂ ದಿಲ್ಲಿಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಆಯುಕ್ತರಿಗೆ ಆಯೋಗವು ನಿರ್ದೇಶನ ನೀಡಿದೆ.

