ರಾಜ್ಯಸಭಾ ಕಲಾಪದ ವೇಳೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಲ್ಸನ್ ಅವರು, ''ಇತ್ತೀಚಿನ ವರ್ಷಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ದಾಳಿಗಳು ಕಳವಳಕಾರಿ ರೀತಿಯಲ್ಲಿ ಉಲ್ಬಣಿಸಿರುವುದಕ್ಕೆ ಭಾರತ ಸಾಕ್ಷಿಯಾಗಿದೆ. ಗುಂಪು ಥಳಿತ, ಕ್ರೈಸ್ತ ಧರ್ಮಗುರುಗಳ ಮೇಲೆ ದಾಳಿಗಳು, ಚರ್ಚ್‌ಗಳು ಹಾಗೂ ಮಸೀದಿಗಳ ವ್ಯವಸ್ಥಿತ ಧ್ವಂಸ ವ್ಯಾಪಕವಾಗಿ ನಡೆಯುತ್ತಿದೆ'' ಎಂದರು.
ಕೆಲವು ರಾಜ್ಯಗಳಲ್ಲಂತೂ ಮತಾಂತರ ವಿರೋಧಿ ಕಾನೂನುಗಳ ದುರ್ಬಳಕೆ ಹೆಚ್ಚುತ್ತಿದೆ. ಅಪ್ರಾಪ್ತರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ವಿಲ್ಸನ್ ಆಪಾದಿಸಿದರು.
2020ರಿಂದೀಚೆಗೆ ಮತಾಂತರ ವಿರೋಧಿ ಕಾನೂನಿನಡಿ 400 ಪ್ರಕರಣಗಳು ದಾಖಲಾಗಿದ್ದು, 1200 ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಸಂಸದ ವಿಲ್ಸನ್ ಸದನದಲ್ಲಿ ಹೇಳಿದ್ದೇನು?
ಸಂವಿಧಾನವು ಭರವಸೆ ನೀಡಿರುವ ಸಮಾನತೆ, ಜಾತ್ಯತೀತತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಅಂತರಾಳಕ್ಕೆ ಅವರು (ಕೋಮುವಾದಿಗಳು) ಹೊಡೆತ ನೀಡುತ್ತಿದ್ದಾರೆ.
ಅಲ್ಪಸಂಖ್ಯಾತರಿಗೆ ಸಾಂಸ್ಥಿಕ ಸಂರಕ್ಷಣೆಯ ತುರ್ತು ಅಗತ್ಯವಿರುವ ಸಂದರ್ಭದಲ್ಲಿ ನ್ಯಾಯದ ಕಾವಲುಗಾರನಾಗಿರಬೇಕಾದ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಕೇವಲ ಖಾಲಿಯಾದ ಕಚೇರಿ ಕಟ್ಟಡವಾಗಿಬಿಟ್ಟಿದೆ ಎಂದರು.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಹುದ್ದೆಗಳು 11 ತಿಂಗಳಿಗೂ ಅಧಿಕ ಸಮಯದಿಂದ, ಅವುಗಳಲ್ಲಿ ಕೆಲವಂತೂ 3 ವರ್ಷಗಳಿಗೂ ಅಧಿಕ ಸಮಯದಿಂದ ಖಾಲಿ ಬಿದ್ದಿವೆ ಎಂದರು.
ಅಲ್ಪಸಂಖ್ಯಾತರ ವಿರುದ್ಧದ ಕೋಮು ತಾರತಮ್ಯ, ಕಡೆಗಣನೆ, ಹಿಂಸಾಚಾರ ಇವೆಲ್ಲಾ ಪಿಡುಗುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವಲ್ಲಿ ಆಯೋಗವು ವಿಫಲವಾಗಿದೆ.
ವಿಳಂಬವಿಲ್ಲದೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕಾಗಿದೆ.

