ಎಪ್‌ಸ್ಟೀನ್ ಜೊತೆ ಹರದೀಪ್ ಸಿಂಗ್ ಪುರಿ ಅವರಿಗೆ ಒಡನಾಟವಿತ್ತೆಂದು ರಾಹುಲ್ ಗಾಂಧಿ ಬುಧವಾರ ಲೋಕಸಭೆಯಲ್ಲಿ ಆಪಾದಿಸಿದ್ದರು. ಇದಾದ ಕೆಲವೇ ತಾಸುಗಳ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ ಅವರು, ಎಪ್‌ಸ್ಟೀನ್ ವಿರುದ್ಧದ ಆರೋಪಗಳಿಗೂ ಮತ್ತು ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ.
ಎಪ್‌ಸ್ಟೀನ್ ಫೈಲ್‌ಗಳಲ್ಲಿರುವ ಮೂವತ್ತು ಲಕ್ಷ ಇಮೇಲ್‌ಗಳ ಪೈಕಿ ತನ್ನ ಹೆಸರು ಕೇವಲ ಮೂರ್ನಾಲ್ಕು ಸಲ ಮಾತ್ರವೇ ಪ್ರಸ್ತಾಪವಾಗಿದೆ. ನಿಯೋಗವೊಂದರ ಭಾಗವಾಗಿ ನಾನು ಎಪ್‌ಸ್ಟೀನ್‌ನನ್ನು ಭೇಟಿಯಾಗಿದ್ದು, ಆತನೊಂದಿಗೆ ಕೇವಲ ಒಂದು ಇಮೇಲ್ ಅನ್ನು ವಿನಿಮಯ ಮಾಡಿಕೊಂಡಿದ್ದೆ. ನಮ್ಮ ನಡುವಿನ ಮಾತುಕತೆಗೂ, ಆತ ಎಸಗಿದ ಅಪರಾಧಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಪುರಿ ತಿಳಿಸಿದ್ದಾರೆ. ನಾನು ಎಪ್‌ಸ್ಟೀನ್ ಜೊತೆ 'ಮೇಕ್ ಇನ್ ಇಂಡಿಯಾ' ಬಗ್ಗೆ ಮಾತನಾಡಿದ್ದೆ ಎಂದೂ ಪುರಿ ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕವು ಬಹಿರಂಗಪಡಿಸಿರುವ ಎಪ್‌ಸ್ಟೀನ್ ಫೈಲ್‌ಗಳಲ್ಲಿ ಹರದೀಪ್ ಸಿಂಗ್ ಪುರಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರು ಪ್ರಸ್ತಾಪವಾಗಿತ್ತೆಂದು ರಾಹುಲ್ ಅವರು ಲೋಕಸಭೆಯಲ್ಲಿ ಆಪಾದಿಸಿದ್ದರು.
ಲೈಂಗಿಕ ಉದ್ದೇಶಗಳಿಗಾಗಿ ಮಾನವ ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ಎಪ್‌ಸ್ಟೀನ್ 2019ರಲ್ಲಿ ನ್ಯೂಯಾರ್ಕ್ ಕಾರಾಗೃಹದಲ್ಲಿ ಮೃತಪಟ್ಟಿದ್ದನು.
2 ಸಾವಿರಕ್ಕೂ ಅಧಿಕ ವೀಡಿಯೊಗಳು ಹಾಗೂ 1.80 ಲಕ್ಷ ಛಾಯಾಚಿತ್ರಗಳು ಸೇರಿದಂತೆ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಮೂವತ್ತು ಲಕ್ಷಕ್ಕೂ ಅಧಿಕ ದಾಖಲೆಗಳನ್ನು ಅಮೆರಿಕದ ಉಪ ಅಟಾರ್ನಿ ಜನರಲ್ ಅವರು ಬಿಡುಗಡೆಗೊಳಿಸಿದ್ದಾರೆ.

