ವಾರಣಾಸಿ: ಮಂಪರು ಪರೀಕ್ಷೆಯು ಪೊಕ್ಸೊ ಕಾಯೆಯಡಿ ತನ್ನ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸತ್ಯವನ್ನು ಸಾಬೀತುಗೊಳಿಸಲು ನೆರವಾಗುವುದಾದರೆ ತಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮಂಪರು ಪರೀಕ್ಷೆಯ ಮೂಲಕ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವಿದ್ದರೆ ಖಂಡಿತವಾಗಿಯೂ ಅದನ್ನು ನಡೆಸಬೇಕು. ಸತ್ಯವನ್ನು ಬಯಲಿಗೆಳೆಯಲು ಲಭ್ಯವಿರುವ ಎಲ್ಲ ವಿಧಾನಗಳನ್ನೂ ಬಳಸಬೇಕು ಎಂದು ಅವರು ಹೇಳಿದರು.
ಈ ನಡುವೆ ಶ್ರೀಗಳು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಅಪರಾಹ್ನ ಕೈಗೆತ್ತಿಕೊಂಡಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ್ದು, ಅಲ್ಲಿಯವರೆಗೆ ಅವರ ಬಂಧನಕ್ಕೆ ತಡೆಯಾಜ್ಞೆಯನ್ನು ನೀಡಿದೆ. ನ್ಯಾಯಾಲಯದ ಆದೇಶವು ಮಾರ್ಚ್ ಮೂರನೇ ವಾರದಲ್ಲಿ ಹೊರಬೀಳುವ ನಿರೀಕ್ಷೆಯಿದೆ.
ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆಯಿದ್ದರೂ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಎಂದಿನಂತೆ ತನ್ನ ದಿನನಿತ್ಯದ ಧಾರ್ಮಿಕ ಚಟುವಟಿಕೆಗಳನ್ನು ಮುಂದುವರಿಸಿದರು ಮತ್ತು ಪೂಜಾ ಕಾರ್ಯವನ್ನು ನೆರವೇರಿಸಿದರು ಎಂದು ಅವರ ಶಿಷ್ಯಸಂಜಯ ಪಾಂಡೆ ತಿಳಿಸಿದರು.
ಈ ವೇಳೆ ಮಠದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುಳ್ಳು ಬಹುಕಾಲ ಉಳಿಯುವುದಿಲ್ಲ, ಸುಳ್ಳುಕಥೆಯನ್ನು ಹೆಣೆದವರ ಬಣ್ಣ ಬಯಲಾಗುತ್ತಿದೆ. ಈ ಕಪಟ ಪ್ರಕರಣದ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಸತ್ಯವು ಸ್ಪಷ್ಟವಾಗುತ್ತದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದರು.
ವೈದ್ಯಕೀಯ ಪರೀಕ್ಷಾ ವರದಿಗಳಿಗೆ ಸಂಬಂಧಿಸಿದ ಪ್ರತಿಪಾದನೆಗಳನ್ನು ಪ್ರಶ್ನಿಸಿದ ಅವರು, 'ವೈದ್ಯಕೀಯ ವರದಿಯು ನಮ್ಮ ಪಾಲ್ಗೊಳ್ಳುವಿಕೆಯನ್ನು ಹೇಗೆ ಸಾಬೀತುಗೊಳಿಸುತ್ತದೆ? ವರದಿಯು ದುಷ್ಕೃತ್ಯವನ್ನು ಸಾಬೀತುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅದು ಯಾರದೋ ಹೇಳಿಕೆಯಾಗಿರಬಹುದು. ಆದರೆ ಅಷ್ಟೊಂದು ದಿನಗಳ ಬಳಿಕ ನಡೆಸಲಾದ ವೈದ್ಯಕೀಯ ತಪಾಸಣೆ ವರದಿಗೆ ಏನು ಅರ್ಥ?' ಎಂದು ಪ್ರಶ್ನಿಸಿದರು.
ಯಾವುದೇ ತಪ್ಪು ನಡೆದಿದ್ದರೂ ಅದಕ್ಕೆ ಯಾರು ಹೊಣೆ ಎನ್ನುವುದು ಸ್ವಯಂಚಾಲಿತವಾಗಿ ಸಾಬೀತಾಗುವುದಿಲ್ಲ ಎಂದೂ ಹೇಳಿದ ಅವರು, 'ನಮ್ಮ ಬಳಿಗೆ ಎಂದೂ ಬಂದಿರದ ಮಗುವಿನೊಂದಿಗೆ ನಮ್ಮ ಹೆಸರನ್ನು ಸುಲಭವಾಗಿ ಜೋಡಿಸಲು ಸಾಧ್ಯವಿಲ್ಲ' ಎಂದರು.
ಮಕ್ಕಳು ದೂರುದಾರ ಅಶುತೋಷ್ ಬ್ರಹ್ಮಚಾರಿ ಅಲಿಯಾಸ್ ಪಾಂಡೆ ಜೊತೆ ವಾಸವಾಗಿದ್ದಾರೆ ಎಂದು ಆರೋಪಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ, ಅವರನ್ನು ಏಕೆ ಬಾಲಗೃಹಕ್ಕೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದರು.
ಮಕ್ಕಳನ್ನು ಹರ್ದೋಯಿಯ ಹೋಟೆಲ್ವೊಂದರಲ್ಲಿ ಇರಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನ ಪ್ರಸ್ತಾವಿಸಿದ ಅವರು, ಪತ್ರಕರ್ತರನ್ನು ಭೇಟಿಯಾಗಲು ಅವರಿಗೆ ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿದರು.
ಪೊಲೀಸರು ದೂರುದಾರನ್ನು ರಕ್ಷಿಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ಹೇಳಿಕೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಟ್ಟುಕಥೆ ಎಷ್ಟೇ ದೊಡ್ಡದಾಗಿರಲಿ, ಅಂತಿಮವಾಗ ಸತ್ಯವು ಹೊರಬೀಳುತ್ತದೆ ಎಂದರು.
ಪೊಕ್ಸೊ ಮತ್ತು ಬಿಎನ್‌ಎಸ್ ಅಡಿ ತನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಗುರುವಾರ ಹೇಳಿದ್ದ ಅವರು, ಇದು ತನ್ನ ಹೆಸರನ್ನು ಕೆಡಿಸಲು ಮತ್ತು ಜಾಗತಿಕವಾಗಿ ಚರ್ಚಿಸಲ್ಪಟ್ಟ ಎಪ್ಸ್ಟೀನ್ ಫೈಲ್ಸ್ಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

