ಕೊಚ್ಚಿ: ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾದ (ಸಿಬಿಸಿಐ) ಅಧ್ಯಕ್ಷರಾಗಿ ಕಾರ್ಡಿನಲ್ ಪೂಲಾ ಅಂಥೋನಿ ಅವರು ಆಯ್ಕೆಯಾಗಿದ್ದು, ದೇಶದಲ್ಲಿಯ ಕ್ಯಾಥೋಲಿಕ್ ಚರ್ಚ್ ಗಳ ಉನ್ನತ ಮಂಡಳಿಯ ಮೊದಲ ದಲಿತ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೆ.7ರಂದು ಬೆಂಗಳೂರಿನಲ್ಲಿ ನಡೆದ ಸಿಬಿಸಿಐನ 37ನೇ ಸಾಮಾನ್ಯ ಸಭೆಯಲ್ಲಿ 64ರ ಹರೆಯದ ಕಾರ್ಡಿನಲ್ ಪೂಲಾ ಅಂಥೋನಿಯವರನ್ನು ಆಯ್ಕೆ ಮಾಡಲಾಗಿದ್ದು, ಇದು ಭಾರತದ ಸುಮಾರು ಎರಡು ಕೋಟಿ ಕ್ಯಾಥೊಲಿಕ್ ಕೈಸ್ತರಿಗೆ ಐತಿಹಾಸಿಕ ಘಳಿಗೆಯಾಗಿದೆ.
ದೇಶಾದ್ಯಂತದಿಂದ ಬಿಷಪ್ ಗಳು ಧಾರ್ಮಿಕ ಸೇವೆ, ಸಾಮಾಜಿಕ ಮತ್ತು ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಲು ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನೂ ಆಯ್ಕೆ ಮಾಡಲಾಯಿತು. ಪ್ರಥಮ ಉಪಾಧ್ಯಕ್ಷರಾಗಿ ತಿರುವನಂತಪುರದ ಆರ್ಚ್ ಬಿಷಪ್ ಥೋಮಸ್ ಮಾರ್ ಕೂರಿಲೋಸ್, ದ್ವಿತೀಯ ಉಪಾಧ್ಯಕ್ಷರಾಗಿ ಕೊಟ್ಟಾಯಂ ಆರ್ಚ್ ಬಿಷಪ್ ಮ್ಯಾಥ್ಯೂ ಮೂಲಕ್ಕಟ್ ಆಯ್ಕೆಯಾದರು. ಸಿಬಿಸಿಐನ ರಾಷ್ಟ್ರೀಯ ಉಪಕ್ರಮಗಳ ಸಂಘಟನೆಯನ್ನು ಮುಂದುವರಿಸಲು ಆರ್ಚ್ ಬಿಷಪ್ ಅನಿಲ್ ಕೌಟೊ ಅವರನ್ನು ಮಹಾ ಕಾರ್ಯದರ್ಶಿಯಾಗಿ ಪುನರಾಯ್ಕೆ ಮಾಡಲಾಗಿದೆ.
ಈ ನಾಯಕತ್ವವು ಲ್ಯಾಟಿನ್, ಸೈರೋ-ಮಲಂಕರ್ ಮತ್ತು ಸೈರೋ-ಮಲಬಾರ್ ಪಂಗಡಗಳ ಪ್ರಾತಿನಿಧ್ಯದೊಂದಿಗೆ ಚರ್ಚ್ ನ ಧಾರ್ಮಿಕ ಮತ್ತು ಪೂಜಾ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ, ತನ್ಮೂಲಕ ಸಿಬಿಸಿಐನ ಎಲ್ಲರನ್ನೂ ಒಳಗೊಳ್ಳುವ ಪ್ರವೃತ್ತಿಯನ್ನು ಎತ್ತಿ ತೋರಿಸಿದೆ.
ನಿರ್ಗಮಿತ ಪದಾಧಿಕಾರಿಗಳಾದ ಆರ್ಚ್ ಬಿಷಪ್ ಮಾರ್ ಆಯಂಡ್ರೂಸ್ ತಳಹತ್, ಆರ್ಚ್ ಬಿಷಪ್ ಜಾರ್ಜ್ ಅಂಥೋನಿಸ್ವಾಮಿ ಮತ್ತು ಬಿಷಪ್ ಜೋಸೆಫ್ ಮಾರ್ ಥೋಮಸ್ ಅವರ ನಾಯಕತ್ವವನ್ನು ಸಭೆಯು ಪ್ರಶಂಸಿಸಿತು.

