ಇಂಫಾಲ್/ಚುರಾಚಾಂದಪುರ: ಮಣಿಪುರದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕುಕಿ ಸಮುದಾಯದ ಶಾಸಕರು ಭಾಗಿಯಾಗಿದ್ದನ್ನು ಖಂಡಿಸಿ ಕುಕಿ ಬುಡಕಟ್ಟು ಸಮುದಾಯದ ಎರಡು ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಚುರಾಚಾಂದಪುರ ಜಿಲ್ಲಾ ಬಂದ್ ಯಶಸ್ವಿಯಾಯಿತು.ಕುಕಿ ಸಮುದಾಯದ ಪ್ರಾಬಲ್ಯ ಹೊಂದಿರುವ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ವಾಹನಗಳ ಸಂಚಾರ ಬಹುಪಾಲು ಸ್ಥಗಿತಗೊಂಡಿತ್ತು.
ಇದರ ಹೊರತಾಗಿಯೂ ಓಡಾಡಿದ ವಾಹನಗಳನ್ನು ತಡೆದ ಸಂಘಟನೆಯ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದರು.
'ಜಿಲ್ಲೆಯ ಬಹುತೇಕ ಮಾರುಕಟ್ಟೆಗಳು ಸ್ಥಗಿತಗೊಂಡಿತ್ತು. ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ತೀವ್ರ ಕಡಿಮೆಯಾಗಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಕಿ ಚುರಾಚಾಂದಪುರ ವಿದ್ಯಾರ್ಥಿ ಸಂಘಟನೆಯು ಶುಕ್ರವಾರ ಮಧ್ಯರಾತ್ರಿಯಿಂದಲೇ ಇಡೀ ಜಿಲ್ಲೆಯ ಬಂದ್‌ಗೆ ಕರೆ ನೀಡಿತ್ತು. ಏಳು ಸಂಘಟನೆಗಳ ಜಂಟಿ ಒಕ್ಕೂಟ (ಜೆಎಫ್-7) ಕುಕಿ ಬಹುಸಂಖ್ಯಾತ ಪ್ರದೇಶಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಘೋಷಿಸಿತ್ತು.
'ಜಿಲ್ಲಾ ಕೇಂದ್ರವಾದ ತುಯಿಬಾಂಗ್ ಪ್ರದೇಶದಲ್ಲಿ ಬಂದ್ ಹೆಚ್ಚು ಪರಿಣಾಮಕಾರಿಯಾಗಿತ್ತು. ಜಿಲ್ಲೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ಜಿಲ್ಲೆಗೆ ಕಳುಹಿಸಿಕೊಡಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಕುಕಿ ಸಮುದಾಯದ 10 ಮಂದಿ ಶಾಸಕರಿದ್ದಾರೆ.

