ಕಾಸರಗೋಡು: ಬೆಂಕಿ, ಪ್ರವಾಹ ಸೇರಿದಂತೆ ವಿಪತ್ತು ನಿರ್ವಹಣೆ ವಿರುದ್ಧ ಸೆಣಸಾಡಲು ಇನ್ನು ಮುಂದೆ ಮಹಿಳಾ ಸಿಬ್ಬಂದಿಯೂ ಕೈಜೋಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅಗ್ನಿಶಾಮಕ ದಳಕ್ಕೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದ್ದು, ಕಳೆದ ಕೆಲವು ತಿಂಗಳಿಂದ ಮಹಿಳಾ ತಂಡವೊಂದು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ಕಾಸರಗೋಡು ಅಗ್ನಿಶಾಮಕ ದಳದಲ್ಲಿ ಐದು ಮಂದಿ ವನಿತಾ ಸಿಬ್ಬಂದಿ ತಂಡ ತಯಾರಾಗಿದ್ದು, ಇವರಲ್ಲಿ ತಿರುವನಂತಪುರದ ಅರುಣಾ ಪಿ. ನಾಯರ್ ಹೊರತುಪಡಿಸಿದರೆ, ಉಳಿದೆಲ್ಲಾ ಸಿಬ್ಬಂದಿ ಕಾಸರಗೋಡು ನಿವಾಸಿಗಳಾಗಿದ್ದಾರೆ.
ಅರುಣಾ ಪಿ. ನಾಯರ್ ತಮ್ಮ ತರಬೇತಿ ಪೂರೈಸಿ, ದೂರದ ತಿರುವನಂತಪುರದಿಂದ ಉತ್ತರ ಕೇರಳದ ತುತ್ತ ತುದಿಯ ಜಿಲ್ಲೆ ಕಾಸರಗೋಡಿಗೆ ಅಗ್ನಿಶಾಮಕ ದಳದ ಸಮವಸ್ತ್ರ ಧರಿಸಿ ಸವಾಲುಗಳ ಜತೆಗೆ ಹೊಸ ಜೀವನದ ಕನಸುಗಳನ್ನು ಹೊತ್ತು ಕೆಲಸ ನಿರ್ವಹಿಸುತ್ತಿದ್ದಾರೆ. ತಿರುವನಂತಪುರಂ ಮೂಲದ ಅರುಣಾ, ಕಾಸರಗೋಡು ಜಿಲ್ಲೆಯ ಮೊದಲ ಮಹಿಳಾ ಅಗ್ನಿಶಾಮಕ ದಳದ ಏಕೈಕ ಇತರ ಜಿಲ್ಲೆಯ ಸದಸ್ಯೆ. ಅರುಣಾ ಪಿ. ನಾಯರ್ ಅವರು ತಮ್ಮ ಕಾಸರಗೋಡಿನ ಸಹೋದ್ಯೋಗಿಗಳಾದ ಬೇಡಡ್ಕ ಮುನ್ನಾಡ್‍ನ ಕೆ ಶ್ರೀಜಿಶಾ, ಈಸ್ಟ್ ಎಳೇರಿ ಕೊಲ್ಲಾಡ ನಿವಾಸಿ ಒ.ಕೆ ಅನುಶ್ರೀ, ಕುಟ್ಟಿಕೋಲ್ ಆನಕಲ್ಲಿನ ಒಟ್ಟಮಾವುಂಗಲ್ ನಿವಾಸಿ ಪ್ರೀತಿ ಪ್ರಕಾಶ್ ಇತರ ಸಿಬ್ಬಂದಿಯಾಗಿದ್ದಾರೆ.
ಅಗ್ನಿಶಾಮಕ ಸೇವೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳುವ ಬಗ್ಗೆ ಸೆಪ್ಟೆಂಬರ್ 2018 ರಲ್ಲಿ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದನ್ವಯ ಕಾಸರಗೋಡಿನ ಅಗ್ನಿಶಾಮಕ ದಳಕ್ಕೆ ಇದೇ ಮೊದಲ ಬಾರಿಗೆ ಐದು ಮಂದಿ ಮಹಿಳಾ ಸಿಬ್ಬಂದಿ ತಮ್ಮ ಸೇವೆ ಮುಡಿಪಾಗಿರಿಸಿಕೊಂಡಿದ್ದಾರೆ.
ಎಡರಂಗ ಸರ್ಕಾರದ ಐತಿಹಾಸಿಕ ತೀರ್ಮಾನದಿಂದ ಅತ್ಯಂತ ಕಠಿಣ ಹಾಗೂ ಸವಾಲಿನ ಕ್ಷೇತ್ರವೊಂದಕ್ಕೆ ಮೊದಲ ಹಂತದಲ್ಲಿ 100 ಅಗ್ನಿಶಾಮಕ ಮಹಿಳಾ ಹುದ್ದೆಗಳನ್ನು ಸೃಷ್ಟಿಸಲಾಯಿತು. ಮೊದಲ ಹಂತದ ನೇಮಕಾತಿಯೊಂದಕ್ಕೆ 80 ಜನರಿಗೆ ತ್ರಿಶೂರ್ ಅಗ್ನಿಶಾಮಕ ದಳದ ತರಬೇತಿ ಅಕಾಡೆಮಿಯಲ್ಲಿ ತರಬೇತಿನೀಡಲಾಗಿದೆ. ಅಗ್ನಿಶಾಮಕ ದಳ ಮಹಿಳೆಯರಿಗೆ ಸೂಕ್ತ ಕೆಲಸವಲ್ಲ ಎಂದು ಹೇಳುತ್ತಿದ್ದ ದಿನಗಳು ಕಳೆದುಹೋಗಿದ್ದು, ಇಂದು ರಾಜ್ಯದಲ್ಲಿ ಪುರುಷರೊಂದಿಗೆ ಸರಿಸಮಾನವಾಗಿ ಹೋರಾಡುವ ಮಹಿಳಾ ಪಡೆ ಕರ್ಯನಿರ್ವಹಿಸುತ್ತಿದೆ.
ಪ್ರಸಕ್ತ ಜಿಲ್ಲೆಯಲ್ಲಿ ಐದು ಅಗ್ನಿಶಾಮಕ ದಳ ಕೇಂದ್ರ ಕಾರ್ಯಾಚರಿಸುತ್ತಿದೆ. ತ್ರಿಕರಿಪುರ, ಕಾಞಂಗಾಡ್, ಕಾಸರಗೋಡು, ಉಪ್ಪಳ ಮತ್ತು ಕುತ್ತಿಕ್ಕೋಲಿನಲ್ಲಿ ಈ ಕೇಂದ್ರಗಳಿದ್ದು, ಚೀಮೇನಿಯಲ್ಲಿ ಹೊಸ ಅಗ್ನಿಶಾಮಕ ದಳದ ಸೇವೆ ಶೀಘ್ರ ಆರಂಭಗೊಳ್ಳಲಿದೆ. ಇದರಲ್ಲಿ ಕುತ್ತಿಕ್ಕೋಲ್ ಮತ್ತು ಉಪ್ಪಳ ಹೊರತುಪಡಿಸಿ ಉಳಿದ ಅಗ್ನಿಶಾಮಕ ಠಾಣೆಗಳಲ್ಲಿ ತಲಾ 28 ಅಗ್ನಿಶಾಮಕ ಸಿಬ್ಬಂದಿಯಿದ್ದರೆ, ಕುತ್ತಿಕ್ಕೋಲ್ ಮತ್ತು ಉಪ್ಪಳ ಠಾಣೆಗಳಲ್ಲಿ ತಲಾ 24ಮಂದಿ ಸಿಬ್ಬಂದಿ ಇದ್ದಾರೆ. ಠಾಣಾಧಿಕಾರಿ, ಸಹಾಯಕ ಠಾಣಾಧಿಕಾರಿ, ಹಿರಿಯ ಅಗ್ನಿಶಾಮಕ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ, ಚಾಲಕರು, ಚಾಲಕ ಕಮ್ ಮೆಕ್ಯಾನಿಕ್ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ.



