ಬದಿಯಡ್ಕ: ಕಲೆಗಳು ನಮ್ಮ ಭಾರತೀಯ ಸಂಸ್ಕøತಿಯ ಪ್ರತೀಕವಾಗಿವೆ. ಧಾರ್ಮಿಕವಾಗಿ ಯಾವುದೇ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕಲೆಗಳ ಪ್ರಸ್ತುತಿ ನಡೆಯುತ್ತದೆ. ಈ ರೀತಿಯ ಸಾಂಸ್ಕೃತಿಕವಾದ ನೃತ್ಯ ಸಂಗೀತಾದಿ ಕಾರ್ಯಕ್ರಮಗಳಿಂದ ದೈವಸಾನಿಧ್ಯ ಪ್ರಸನ್ನಗೊಳ್ಳುತ್ತದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಮಹಾಶಿವರಾತ್ರಿಯ ದಿನದಂದು ಬಳ್ಳಪದವು ವೀಣಾವಾದಿನೀ ಸಂಗೀತ ವಿದ್ಯಾಪೀಠ ಏರ್ಪಡಿಸಿದ ಅಖಂಡ ಶಿವ ಸಂಗೀತ ಸ್ಮರಣಂ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಾದಪ್ರಿಯ ಶಿವನನ್ನು ಸಂಗೀತಾರ್ಚನೆಯ ಮೂಲಕ ಆರಾಧಿಸಿದಲ್ಲಿ ಇಷ್ಟಾರ್ಥ ಸಿದ್ಧಿಯನ್ನು ಭಕ್ತವತ್ಸಲನಾದ ಶಿವ ನೆರವೇರಿಸಿ ಕೊಡುತ್ತಾನೆ ಎಂದು ನುಡಿದು, ನಿರಂತರ ಹದಿನೈದು ಗಂಟೆಗಳ ಕಾಲ ನಡೆಯುವ ಸಂಗೀತ, ನೃತ್ಯಾದಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ಸುಕುಮಾರನ್, ಸಂಸ್ಥೆಯ ಚಾರ್ಟರ್ಡ್ ಅಕೌಂಟೆಂಟ್ ಹೆಚ್.ಎಸ್.ಭಟ್, ವೈದ್ಯ, ಸಂಗೀತ ಕಲಾವಿದ ಶಂಕರ್ ರಾಜ್ ಆಲಂಪಾಡಿ ಹಾಗೂ ಮಂಗಳೂರು ಆಕಾಶವಾಣಿಯ ನಿಲಯದ ಕಲಾವಿದ ರಫೀಕ್ ಖಾನ್ ಶುಭ ಹಾರೈಸಿದರು. ಸಂಸ್ಥೆಯ ನಿರ್ದೇಶಕ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ, ರವೀಂದ್ರ ಸ್ವಾಮಿ ವಂದಿಸಿದರು. ಸುಶೀಲಾ ಕೆ. ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಪ್ರಮುಖ ಸಂಗೀತ ಕಛೇರಿಗಳಲ್ಲಿ ಟಿ.ಪಿ. ಶ್ರೀನಿವಾಸನ್ ಕಾಞಂಗಾಡ್ ಅವರಿಂದ ಹಾಡುಗಾರಿಕೆ, ಬಳಿಕ ಹಿಂದೂಸ್ಥಾನೀ ಕಲಾವಿದ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ್ ವಾದನ, ಕೋಟೆಕ್ಕಲ್ ರಂಜಿತ್ ವಾರಿಯರ್, ಕಾಸರಗೋಡು ಸದಾಶಿವ ಆಚಾರ್ಯ, ಕುಮಾರಿ ವಿಜಯಶ್ರೀ ಗುರುಮೂರ್ತಿ ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಜಿತ್ ಸುಬ್ರಹ್ಮಣ್ಯ ಅವರಿಂದ ಹಿಂದುಸ್ತಾನಿ ಗಾಯನ, ಅರವಿಂದ ಆಚಾರ್ಯ ಮತ್ತು ಬಳಗದವರಿಂದ ಭಜನ್, ರಾಮಕೃಷ್ಣ ಕಾಟುಕುಕ್ಕೆ ಹಾಗೂ ಕಿಶೋರ್ ಪೆರ್ಲ ಅವರಿಂದ ದಾಸವಾಣಿ, ಮಧೂರು ನಾಟ್ಯ ಮಂಟಪದ ವಿದ್ಯಾರ್ಥಿಗಳಿಂದ ಭರತನಾಟ್ಯ, ಹಾಗೂ ವೀಣಾವಾದಿನಿಯ ವಿದ್ಯಾರ್ಥಿಗಳಿಂದ ಸಂಗೀತಾರ್ಚನೆ ಸೇವೆ ನಡೆಯಿತು. ಬ್ರಹ್ಮಶ್ರೀ ಆಲಂಗಾರು ರಾಧಾಕೃಷ್ಣ ಭಟ್ ಅವರು ಮಹಾಶಿವಪೂಜೆ ನೆರವೇರಿಸಿದರು. ನಡುರಾತ್ರಿ ಹನ್ನೆರಡು ಗಂಟೆಗೆ ಧ್ಯಾನ ಹಾಗೂ ಶಿವನಮನ ನಡೆಯಿತು. ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಅವರಿಂದ ಪ್ರಾತಃಕಾಲದ ಪ್ರಮುಖ ಸಂಗೀತ ಕಛೇರಿಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ವೇಣುಗೋಪಾಲ್ ಶ್ಯಾನುಭೋಗ್, ಪ್ರಭಾಕರ ಕುಂಜಾರು, ಕುಮಾರಿ ಧನಶ್ರೀ ಶಬರಾಯ ಮಂಗಳೂರು, ಕಲ್ಲೇಕುಳಂಗರ ಉಣ್ಣಿಕೃಷ್ಣನ್, ಶ್ರೀಧರ್ ಭಟ್ ಬಡಕೆಕೆರೆ, ಕುಮಾರಿ ರತ್ನಶ್ರೀ ಅಯ್ಯರ್, ಲವ ಐಲ, ಸತ್ಯನಾರಾಯಣ ಐಲ ಮುಂತಾದವರನ್ನೊಳಗೊಂಡು 50ಕ್ಕೂ ಹೆಚ್ಚು ಕಲಾವಿದರು ಭಾಗಿಗಳಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಮಸ್ತ ಕಲಾವಿದರನ್ನು ಅಭಿನಂದಿಸುವ "ಕಲೋಪಾಸಕ ಸಪರ್ಯ" ಕಾರ್ಯಕ್ರಮವನ್ನು ಗುರುಗಳಾದ ಯೋಗೀಶ ಶರ್ಮ ಬಳ್ಳಪದವು ನೆರವೇರಿಸಿದರು.



