ಮುಂಬೈ: ಅಜಿತ್ ಪವಾರ್ ಅವರ ವಿಮಾನ ಅಪಘಾತದ ಕುರಿತು ಹಲವು ಅನುಮಾನಗಳಿವೆ ಎಂದು ಹೇಳಿರುವ ಅವರ ಸೋದರಳಿಯ ಹಾಗೂ ಶಾಸಕ ರೋಹಿತ್ ಪವಾರ್, ಘಟನೆಯ ಬಗ್ಗೆ ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
ಮಮತಾ ಬ್ಯಾನರ್ಜಿ, ಸಂಜಯ್ ರಾವತ್, ಎನ್‌ಸಿಪಿ ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷದ ಶಾಸಕರು ಸೇರಿದಂತೆ ಅನೇಕ ರಾಜಕೀಯ ನಾಯಕರು ಈ ಪ್ರಕರಣದ ಬಗ್ಗೆ ಪ್ರಶ್ನೆಗಳು ಎತ್ತಿರುವ ಸಂದರ್ಭದಲ್ಲಿ ಅವರ ಹೇಳಿಕೆಗಳು ಗಮನ ಸೆಳೆದಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಒಂದೇ ಪ್ರಶ್ನೆ ಇದೆ; ಇದು ಅಪಘಾತವೇ ಅಥವಾ ಇನ್ನೇನಾದರೂ ಆಗಿದೆಯೇ?" ಎಂದು ಪ್ರಶ್ನಿಸಿದರು. ವಿಮಾನದಲ್ಲಿ ಹೆಚ್ಚುವರಿ ಇಂಧನ ಟ್ಯಾಂಕ್ ಗಳನ್ನು ಅಳವಡಿಸಲಾಗಿತ್ತೇ ಎಂಬುದನ್ನು ಹ್ಯಾಂಗರ್ ನ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲಿಸಬೇಕೆಂದು ಒತ್ತಾಯಿಸಿದ ಅವರು, "ಹೆಚ್ಚುವರಿ ಇಂಧನ ಟ್ಯಾಂಕ್ ಗಳು ಕೇವಲ ಕಾನೂನುಬಾಹಿರವಷ್ಟೇ ಅಲ್ಲ, ಅವು ಬಾಂಬ್ ನಂತೆಯೂ ಕಾರ್ಯನಿರ್ವಹಿಸಬಹುದು. ಪೈಲಟ್ ಗೆ ಇಂಧನ ಉಳಿಸಲು ಸೂಚನೆ ನೀಡಲಾಗಿತ್ತೇ? ಅವರು ವಿಮಾನವನ್ನು ಮತ್ತೊಂದು ಸುತ್ತು ಏಕೆ ತಿರುಗಿಸಲಿಲ್ಲ? ಇಳಿಯಲು ಬೇರೆ ಮಾರ್ಗವಿತ್ತೇ?" ಎಂದು ಪ್ರಶ್ನಿಸಿದರು.
ಪ್ರಯಾಣದ ವೇಳಾಪಟ್ಟಿ ಬದಲಾವಣೆಯ ಕುರಿತು ವಿವರಿಸಿದ ಅವರು, "ಅಜಿತ್ ಪವಾರ್ ಅವರು ಜನವರಿ 27ರ ಸಂಜೆ ಮುಂಬೈನಿಂದ ಪುಣೆಗೆ ಹೊರಡುವ ಯೋಜನೆ ಇತ್ತು. ಬೆಂಗಾವಲು ಪಡೆ ಕೂಡ ಸಿದ್ಧವಾಗಿತ್ತು. ಆದರೆ ಒಬ್ಬ ಉನ್ನತ ನಾಯಕ ಭೇಟಿ ಮಾಡಿದ ಕಾರಣ ವಿಳಂಬವಾಯಿತು. ಹೀಗಾಗಿ ಯೋಜನೆಯನ್ನು ಬದಲಿಸಿ ಜನವರಿ 28ರ ಬೆಳಿಗ್ಗೆ ಪ್ರಯಾಣಿಸಲು ನಿರ್ಧರಿಸಿದರು. ದಾದಾ ವಿಮಾನ ಹಾರಾಟದ ವಿಚಾರದಲ್ಲಿ ಅತ್ಯಂತ ಜಾಗರೂಕರಾಗಿದ್ದರು. ಅವರು ಯಾವತ್ತೂ ಯಾವುದೇ ಅಪಾಯವನ್ನು ತೆಗೆದುಕೊಳ್ಳುವವರಲ್ಲ. ಸಮಯಕ್ಕೆ ವಿಮಾನ ನಿಲ್ದಾಣ ತಲುಪಿದ್ದರೂ, ವಿಮಾನ ಹೊರಟದ್ದು ತಡವಾಯಿತು," ಎಂದರು.
ಅಪಘಾತದ ತನಿಖೆಯನ್ನು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಗಳು ನಡೆಸಬೇಕೆಂದು ಒತ್ತಾಯಿಸಿದ ರೋಹಿತ್ ಪವಾರ್ ಅವರು, "ಸರ್ಕಾರಿ ತನಿಖೆಯ ಹೊರತಾಗಿ ಯುಕೆಯ AAIB, ಫ್ರಾನ್ಸ್‌ನ BEA ಅಥವಾ ಅಮೆರಿಕದ NTSB ಸಂಸ್ಥೆಗಳ ಪೈಕಿ ಯಾವುದಾದರೂ ಒಂದರಿಂದ ಈ ಕುರಿತು ತನಿಖೆ ನಡೆಯಬೇಕು," ಎಂದು ಹೇಳಿದರು.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ ರೋಹಿತ್ ಪವಾರ್ ವಿಮಾನದ ನಿರ್ವಹಣೆಯ ಮೇಲೂ ಅನುಮಾನ ವ್ಯಕ್ತಪಡಿಸಿದರು. "ದಾದಾ ಎಡಭಾಗದಲ್ಲಿ ಕುಳಿತಿದ್ದರು. ಹೆಚ್ಚುವರಿ ಸಾಮಾನುಗಳು ಹಾಗೂ ದಾಖಲೆಗಳನ್ನು ಹಿಂಭಾಗದಲ್ಲಿ ಇಡಲಾಗಿತ್ತು. ಬೆಳಿಗ್ಗೆ 7:10ಕ್ಕೆ ಪೈಲಟ್ ಬಾರಾಮತಿಯಲ್ಲಿ ಗೋಚರತೆಯ ಕುರಿತು ಪರಿಶೀಲಿಸಿದ್ದರು. ಎಲ್ಲವೂ ಸರಿಯಾಗಿದೆ ಎಂದು ತಿಳಿಸಲಾಯಿತು. ಆದರೆ ಒಬ್ಬ ಮಹಿಳಾ ಪ್ರತ್ಯಕ್ಷದರ್ಶಿಯು ವಿಮಾನ ಇಳಿಯುವಾಗ ವಿಚಿತ್ರ ಶಬ್ದ ಮಾಡುತ್ತಿತ್ತು ಎಂದು ಹೇಳಿದ್ದಾರೆ," ಎಂದು ವಿವರಿಸಿದರು.
2023ರ ಲಿಯರ್ ಜೆಟ್ ಅಪಘಾತದ ವರದಿ ಇನ್ನೂ ಪ್ರಕಟವಾಗಿಲ್ಲವೆಂದು ಆರೋಪಿಸಿದ ಅವರು, ಡಿಜಿಸಿಎ ಮೇಲೆ ಖಾಸಗಿ ಸಂಸ್ಥೆಯ ಪ್ರಭಾವವಿದೆಯೇ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು. "ESA ರದ್ದುಪಡಿಸಿದರೂ VSR ಸಂಸ್ಥೆ ಇನ್ನೂ ಕಾರ್ಯನಿರ್ವಹಿಸುತ್ತಿರುವುದು ಪ್ರಶ್ನಾರ್ಹ," ಎಂದು ರೋಹಿತ್ ಪವಾರ್ ಕಳವಳ ವ್ಯಕ್ತಪಡಿಸಿದರು.
ಪೈಲಟ್ ಬದಲಾವಣೆಯ ವಿಚಾರದಲ್ಲೂ ಪ್ರಶ್ನೆ ಎತ್ತಿದ ಅವರು, "ಹಾರಾಟದ ಮೊದಲು ಮುಖ್ಯ ಪೈಲಟ್ ಅನ್ನು ಏಕೆ ಬದಲಾಯಿಸಲಾಯಿತು? ಸಾಹಿಲ್ ಮದನ್ ಮತ್ತು ಯಶ್ ಅವರನ್ನು ಕೊನೆಯ ಕ್ಷಣದಲ್ಲಿ ಬದಲಿಸಿದರು. ಸುಮಿತ್ ಕಪೂರ್ ಹಾಂಗ್ ಕಾಂಗ್ ನಿಂದ ಏಕೆ ಹಿಂತಿರುಗಿದರು? ಅವರು ವಿಮಾನ ಹತ್ತುವಾಗ ಮದ್ಯಪಾನ ಮಾಡಿದ್ದರೇ?" ಎಂದು ಪ್ರಶ್ನಿಸಿದರು.
ಪೈಲಟ್‌ನ ಕುಟುಂಬದವರು ನನ್ನ ಹೇಳಿಕೆಯನ್ನು ಅತಿರೇಕವಾಗಿದೆ ಎಂದು ಭಾವಿಸಬಹುದು. ನಮಗೆ ಸ್ಪಷ್ಟ ಉತ್ತರಗಳು ಅಗತ್ಯವಿವೆ. ನಾವು ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದೇವೆ. ಸುಮಿತ್ ಕಪೂರ್ ಅವರ ಹಿಂದಿನ ಸೇವಾ ದಾಖಲೆಗಳು ಪ್ರಶ್ನಾರ್ಹವಾಗಿವೆ. 2010ರಲ್ಲಿ ಅವರು ವಿಮಾನದಲ್ಲಿ ಹಾರಾಟ ಮಾಡುವ ಮುನ್ನ ಮದ್ಯಪಾನ ಮಾಡಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿತ್ತು. ಇದೇ ರೀತಿಯ ಘಟನೆ 2017ರಲ್ಲಿಯೂ ಸಂಭವಿಸಿತ್ತು. ಮದ್ಯಪಾನದ ಕಾರಣದಿಂದ ಅವರು ಅಮೆರಿಕದ ತರಬೇತಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಎಲ್ಲ ಅಂಶಗಳನ್ನು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕಾಗಿದೆ. ಜೊತೆಗೆ, ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಪೈಲಟ್ ಗಳು ಹಾರಾಟ ನಡೆಸಿದ ಕುರಿತು VRS ಸಂಸ್ಥೆಯ ಮಾಲೀಕರ ಆಂತರಿಕ ವಾಟ್ಸಾಪ್ ಸಂಭಾಷಣೆಗಳನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು ಎಂದು ರೋಹಿತ್ ಪವಾರ್ ಒತ್ತಾಯಿಸಿದ್ದಾರೆ.
"ಇದು ಕೇವಲ ಅಪಘಾತವಲ್ಲ, ಪಿತೂರಿಯೂ ಆಗಿರಬಹುದು ಎಂಬ ನಂಬಿಕೆ ನನ್ನದು. ಟ್ರಾನ್ಸ್‌ಪಾಂಡರ್ ನ ಕೊನೆಯ ಒಂದು ನಿಮಿಷದ ವಿವರಗಳು ಲಭ್ಯವಿಲ್ಲ. 8:43ಕ್ಕೆ ಅದನ್ನು ಏಕೆ ಸ್ಥಗಿತಗೊಳಿಸಲಾಯಿತು? ಕೊನೆಯ ಕ್ಷಣದಲ್ಲಿ ಏನಾಯಿತು? ಮುಖ್ಯ ಪೈಲಟ್‌ನ ಧ್ವನಿ ದಾಖಲೆ ಏಕೆ ಇಲ್ಲ?" ಎಂದು ಅವರು ತೀವ್ರವಾಗಿ ಪ್ರಶ್ನಿಸಿದ್ದಾರೆ.

