ಲಕ್ನೋ: ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿದಂತೆ ಒಂದು ಕುಟುಂಬದ ಐವರು ಸದಸ್ಯರು ಉತ್ತರಪ್ರದೇಶದ ಮಥುರಾ ಜಿಲ್ಲೆಯ ಖಪ್ಪರ್‌ಪುರ ಗ್ರಾಮದ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಸಾಮೂಹಿಕ ಆತ್ಮಹತ್ಯೆ ಪ್ರಕರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಒಂದು ಆತ್ಮಹತ್ಯಾ ಪತ್ರ, ಗೋಡೆಯ ಮೇಲೆ ಬರೆಯಲಾದ ಒಂದು ಸಂದೇಶ ಮತ್ತು ಕುಟುಂಬದ ಹಿರಿಯ ವ್ಯಕ್ತಿ ಮಾಡಿರುವ ವೀಡಿಯೊವೊಂದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಮೃತರನ್ನು ರೈತ ಮನೀಶ್ ಕುಮಾರ್ (35), ಅವರ 32 ವರ್ಷದ ಪತ್ನಿ ಹಾಗೂ ಇಬ್ಬರು ಹೆಣ್ಣು ಮತ್ತು ಒಂದು ಗಂಡು ಸೇರಿದಂತೆ ಅವರ ಮೂವರು ಅಪ್ರಾಪ್ತ ಮಕ್ಕಳು ಎಂಬುದಾಗಿ ಗುರುತಿಸಲಾಗಿದೆ ಎಂದು ಮಥುರಾ ಪೊಲೀಸ್ ಸೂಪರಿಂಟೆಂಡೆಂಟ್ ಶ್ಲೋಕ್ ಕುಮಾರ್ ತಿಳಿಸಿದರು.
ಘಟನೆಯ ಬಗ್ಗೆ ಮನೀಶ್ ಕುಮಾರ್‌ರ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳು ಬೆಳಗ್ಗೆ ಆಡಲು ಮನೆಯಿಂದ ಹೊರಗೆ ಬಾರದಿರುವುದನ್ನು ಕಂಡು ಮನೀಶ್‌ರ ಸಹೋದರ ಬಾಗಿಲು ಒಡೆದು ಮನೆಯೊಳಗೆ ಹೋದಾಗ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ.
ಅವರ ಆತ್ಮಹತ್ಯೆಗೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

