HEALTH TIPS

ಸದನ ಕಾವೇರಿಸಿದ 'ಶರಣಾಗತಿ': ರಾಹುಲ್-ನಿರ್ಮಲಾ ಜಟಾಪಟಿ

ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿಷಯ ಲೋಕಸಭೆಯಲ್ಲಿ ಬುಧವಾರ ಭಾರಿ ಜಟಾಪಟಿಗೆ ಕಾರಣವಾಯಿತು. 'ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರೆ, 'ಈ ಹಿಂದೆ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಮುಂದೆ ಶರಣಾಗಿದ್ದುದು ಕಾಂಗ್ರೆಸ್‌ ನೇತೃತ್ವದ ಸರ್ಕಾರ.
ದೇಶದ ಹಿತ ಕಾಪಾಡಿದ್ದು ಮೋದಿ ಸರ್ಕಾರ' ಎಂದು ಸಚಿವೆ ನಿರ್ಮಲಾ ಮಾರುತ್ತರ ನೀಡಿದರು.

ಭಾರತ ಮಾತೆಯ ಮಾರಿದ್ದೀರಿ: ರಾಹುಲ್‌

ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, 'ಈ ಒಪ್ಪಂದದ ಮೂಲಕ ಸರ್ಕಾರವು ಭಾರತ ಮಾತೆಯನ್ನು ಮಾರಾಟ ಮಾಡಿದೆ. ಅಮೆರಿಕಕ್ಕೆ ಮೋದಿ ಸಂಪೂರ್ಣ ಶರಣಾಗಿದ್ದಾರೆ' ಎಂದು ಆರೋಪಿಸಿದರು.

ಕೇಂದ್ರ ಬಜೆಟ್‌ ಕುರಿತು ಲೋಕಸಭೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಸುಮಾರು 50 ನಿಮಿಷ ಮಾತನಾಡಿದ ಅವರು, 'ಈ ಒಪ್ಪಂದವು ಭಾರತದ ಇಂಧನ ಮತ್ತು ದತ್ತಾಂಶ ಸುರಕ್ಷತೆಗೆ, ಜವಳಿ ಮತ್ತು ಕೃಷಿ ಕ್ಷೇತ್ರಗಳಿಗೆ ಹಾನಿ ಮಾಡುತ್ತದೆ. ಭಾರತವನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ' ಎಂದು ಕಟುವಾಗಿ ಪ್ರಶ್ನಿಸಿದರು.

'ಸಾಮಾನ್ಯ ಸಂದರ್ಭಗಳಲ್ಲಿ ಪ್ರಧಾನಿಯವರು ದೇಶವನ್ನು ಮಾರುವುದಿಲ್ಲ ಎಂಬುದು ನನಗೆ ತಿಳಿದಿದೆ. ಅವರು ಭಾರತವನ್ನು ಏಕೆ ಮಾರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಅವರ ಮಿತ್ರ ಗೌತಮ್‌ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣವಿದೆ. ಪ್ರಧಾನಿಯ ಕತ್ತಿನ ಮೇಲೆ ಅವರ (ಅಮೆರಿಕದವರ) ಹಿಡಿತ ಬಿಗಿಯಾಗಿದೆ. ಪ್ರಧಾನಿ ಕಣ್ಣಿನಲ್ಲಿ ಭಯ ಕಾಣಬಹುದು' ಎಂದು ವ್ಯಂಗ್ಯವಾಡಿದರು.

'ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದು-ಎಪ್‌ಸ್ಟೈನ್‌ ಫೈಲ್ಸ್. ಎರಡನೆಯದು-ಇನ್ನೂ 30 ಲಕ್ಷ ಫೈಲ್‌ಗಳು ಲಾಕ್‌ ಆಗಿವೆ' ಎಂದು ಮಾರ್ಮಿಕವಾಗಿ ಹೇಳಿದರು. 'ಮೋದಿ ಸೇರಿದಂತೆ ಭಾರತದ ಯಾವುದೇ ಪ್ರಧಾನಿಯೂ ಒತ್ತಡ ಇಲ್ಲದಿದ್ದರೆ ಇಂತಹ ಒಪ್ಪಂದಕ್ಕೆ ಒಪ್ಪುತ್ತಾರೆ ಎಂಬುದನ್ನು ನಾನು ನಂಬುವುದಿಲ್ಲ' ಎಂದರು.

ಎಪ್‌ಸ್ಟೈನ್‌ ಫೈಲ್ಸ್‌ನಲ್ಲಿ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮತ್ತು ಉದ್ಯಮಿ ಅನಿಲ್‌ ಅಂಬಾನಿ ಅವರ ಹೆಸರುಗಳೂ ಪ್ರಸ್ತಾಪವಾಗಿರುವುದನ್ನು ರಾಹುಲ್‌ ಉಲ್ಲೇಖಿಸಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಬಿಜೆಪಿ ಸದಸ್ಯ ಜಗದಾಂಬಿಕಾ ಪಾಲ್‌, 'ಸದನದ ಸದಸ್ಯರಲ್ಲದವರ ಹೆಸರನ್ನು ಹೇಳಬೇಡಿ' ಎಂದು ಸೂಚಿಸಿದರು. 'ಉದ್ಯಮಿ' ಎಂದು ರಾಹುಲ್‌ 2-3 ಸಲ ಉಲ್ಲೇಖಿಸಿದರು. ಭಾಷಣದ ಕೊನೆಯಲ್ಲಿ 'ಅನಿಲ್‌ ಅಂಬಾನಿ' ಎಂದೇ ಹೇಳಿದರು.

ಬಿಜೆಪಿ ಸದಸ್ಯರು ಪದೇ ಪದೇ ಎದ್ದು ನಿಂತು, 'ರಾಹುಲ್‌ ಗಾಂಧಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ಆರೋಪಿಸಿದರು. ಆರೋಪಗಳನ್ನು ದಾಖಲೆ ಸಮೇತ ದೃಢೀಕರಿಸುವಂತೆ ಒತ್ತಾಯಿಸಿದರು. ನನ್ನ ಹೇಳಿಕೆಗಳನ್ನು ದಾಖಲೆ ಸಮೇತ ದೃಢೀಕರಿಸುತ್ತೇನೆ ಎಂದು ವಿಪಕ್ಷ ನಾಯಕ ಪ್ರತಿಕ್ರಿಯಿಸಿದರು. 'ಕೇಂದ್ರ ಬಜೆಟ್‌ಗೆ ಸೀಮಿತವಾಗಿ ವಿಷಯ ‍‍ಪ್ರಸ್ತಾಪಿಸಿ' ಎಂದು ಪಾಲ್‌ ಪದೇ ಪದೇ ಮನವಿ ಮಾಡಿದರು. 'ನೀವು ಮೊದಲು ನಮ್ಮ ಪಕ್ಷದಲ್ಲೇ ಇದ್ದವರು' ಎಂದು ರಾಹುಲ್‌ ಛೇಡಿಸಿದರು. ಅಮೆರಿಕ ಜತೆಗಿನ ವ್ಯಾಪಾರ ಒಪ್ಪಂದವನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ರಾಹುಲ್‌ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್‌ ಪ್ರಹಾರ

*ಯುದ್ಧದ ಯುಗ ಮುಗಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಬಾಲ್‌ ಹೇಳಿಕೆ ನೀಡಿದ್ದರು. ವಾಸ್ತವವಾಗಿ, ನಾವು ಯುದ್ಧದ ಯುಗಕ್ಕೆ ಕಾಲಿಡುತ್ತಿದ್ದೇವೆ. ಉಕ್ರೇನ್‌ನಲ್ಲಿ ಯುದ್ಧವಿದೆ, ಗಾಜಾದಲ್ಲಿ ಯುದ್ಧವಿತ್ತು, ಮಧ್ಯಪ್ರಾಚ್ಯದಲ್ಲಿ ಯುದ್ಧವಿದೆ, ಇರಾನ್‌ನಲ್ಲಿ ಯುದ್ಧದ ಬೆದರಿಕೆ ಇದೆ, ನಮ್ಮಲ್ಲಿ ಆಪರೇಷನ್ ಸಿಂಧೂರ ನಡೆದಿತ್ತು. ನಾವು ಅಪಾಯಕಾರಿ ಜಗತ್ತಿಗೆ ಕಾಲಿಡುತ್ತಿದ್ದೇವೆ. ನಮ್ಮ ಸಾಮರ್ಥ್ಯಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮ್ಮ ದೇಶದ ಕೇಂದ್ರ ಶಕ್ತಿ ನಮ್ಮ ಜನ.

* ದೇಶದ ಜನ, ದತ್ತಾಂಶ, ಆಹಾರ ಪೂರೈಕೆ ಮತ್ತು ಇಂಧನ ವ್ಯವಸ್ಥೆಯನ್ನು ರಕ್ಷಿಸುವ ಅಗತ್ಯವಿದೆ. ಆದರೆ, ಇಂತಹ ವಿಷಯಗಳಲ್ಲಿ ಕೇಂದ್ರ ಸರ್ಕಾರ ರಾಜಿ ಮಾಡಿಕೊಂಡಿದೆ.

* ಒಂದು ವೇಳೆ, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು 'ಇಂಡಿಯಾ ಮೈತ್ರಿಕೂಟದ ಸರ್ಕಾರ' ಮಾತುಕತೆ ನಡೆಸಿದ್ದರೆ, ಭಾರತವನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸ್ಪ‍ಷ್ಟವಾಗಿ ಹೇಳುತ್ತಿತ್ತು.

* ನಾವು ಯಾರಿಂದ ತೈಲ ಖರೀದಿಸಬೇಕು ಎಂಬುದನ್ನು ನಮ್ಮ ಪ್ರಧಾನಿ ನಿರ್ಧರಿಸುವುದಿಲ್ಲ. ಅದನ್ನು ಟ್ರಂಪ್‌ ನಿರ್ಧಾರ ಮಾಡುತ್ತಾರೆ. ಅವರು ಇಷ್ಟಪಡದ ದೇಶದಿಂದ ತೈಲ ಖರೀದಿಸಿದರೆ ನಮ್ಮನ್ನು ಶಿಕ್ಷಿಸುತ್ತಾರೆ. ಸುಂಕವನ್ನು ಶೇ 50ಕ್ಕೆ ಏರಿಸುತ್ತಾರೆ.

*ಅಮೆರಿಕದಲ್ಲಿ ಮೊದಲು ಭಾರತದ ಉತ್ಪನ್ನಗಳಿಗೆ ಶೇ 3 ಸುಂಕ ಇತ್ತು. ಕೆಲವು ತಿಂಗಳ ಹಿಂದೆ ಅದನ್ನು ಶೇ 50ಕ್ಕೆ ಏರಿಸಲಾಗಿತ್ತು. ನಮ್ಮ ಸರ್ಕಾರವು ಸಂಪೂರ್ಣವಾಗಿ ಶರಣಾದ ಬಳಿಕ ಶೇ 18ಕ್ಕೆ ಇಳಿಸಲಾಗಿದೆ. ಈ ಒಪ್ಪಂದದಿಂದ ಭಾರಿ ಲಾಭವಾಗಿರುವುದು ಅಮೆರಿಕಕ್ಕೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ಪ್ರಮಾಣ 46 ಬಿಲಿಯನ್ ಡಾಲರ್‌ನಿಂದ 146 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದು ಅಸಂಬದ್ಧ.

* ಇದು ಕೇವಲ ಪ್ರಧಾನಿ ಅವರ ಶರಣಾಗತಿಯಲ್ಲ; 150 ಕೋಟಿ ಭಾರತೀಯರ ಭವಿಷ್ಯದ ಶರಣಾಗತಿ. ನಾವು ಪ್ರಕ್ಷುಬ್ಧ ಕಾಲಕ್ಕೆ ಹೋಗುತ್ತಿದ್ದೇವೆ. ರಾಷ್ಟ್ರವೇ ಮಾರಾಟವಾಗಿದೆ. ನಮ್ಮ ದತ್ತಾಂಶಗಳನ್ನು, ರೈತರನ್ನು, ಎಲ್ಲ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು, ನಮ್ಮ ಪಡೆಗಳು ಮತ್ತು ನಮ್ಮ ಇಂಧನ ಭದ್ರತೆಯನ್ನು ಮಾರಾಟ ಮಾಡಲಾಗಿದೆ.

ಡಬ್ಲುಟಿಒಗೆ ಶರಣಾದವರು ನೀವು: ರಾಹುಲ್ ವಿರುದ್ಧ ನಿರ್ಮಲಾ ವಾಗ್ದಾಳಿ

ನವದೆಹಲಿ: '2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಮುಂದೆ ಶರಣಾಗಿ ರೈತರು, ಬಡವರು ಹಾಗೂ ದೇಶವನ್ನೇ ಮಾರಾಟ ಮಾಡಿತ್ತು. ಈಗ ನೋಡಿದರೆ, ವ್ಯಾಪಾರ ಒಪ್ಪಂದ ಕುರಿತು ಹೇಗೆ ಮಾತುಕತೆ ನಡೆಸಬೇಕು ಎಂಬ ಬಗ್ಗೆ ಇವರು (ರಾಹುಲ್‌ ಗಾಂಧಿ) ನಮಗೆ ಉಪದೇಶ ಮಾಡುತ್ತಿದ್ದಾರೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು, ಒಂದೂವರೆ ಗಂಟೆ ಮಾತನಾಡಿ ಉತ್ತರ ನೀಡಿದ ಅವರು, ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ ಹಾಗೂ ಕೇರಳದಲ್ಲಿನ ಸಿಪಿಎಂ ನೇತೃತ್ವದ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು.

'ಈ ಎರಡೂ ರಾಜ್ಯ ಸರ್ಕಾರಗಳು ದುರಾಡಳಿತ ನಡೆಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಾಸಕ್ತಿ ಪರವಾಗಿಯೇ ಯಾವಾಗಲೂ ಮಾತನಾಡುತ್ತಾರೆ' ಎಂದರು.

'ಒಂದು ವೇಳೆ ರಾಹುಲ್‌ ಗಾಂಧಿ ಅವರು ಬಜೆಟ್‌ಅನ್ನು ಓದಿದ್ದರೆ ಡೇಟಾ, ಆಹಾರ ಮತ್ತು ಇಂಧನ ಭದ್ರತೆಗೆ ವ್ಯಾಪಾರ ಒಪ್ಫಂದದಲ್ಲಿ ಅವಕಾಶವೇ ಇಲ್ಲ ಎಂಬಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ' ಎಂದು ನಿರ್ಮಲಾ ಹೇಳಿದರು.

'ಪ್ರಧಾನಿ ಮೋದಿ ಶರಣಾಗಿದ್ದಾರೆ, ರೈತರನ್ನು ಮಾರಾಟ ಮಾಡಲಾಗಿದೆ ಎಂದೆಲ್ಲಾ ರಾಹುಲ್‌ ಗಾಂಧಿ ಹೇಳಿದ್ದಾರೆ. ದೇಶದ ಹಿತಾಸಕ್ತಿಗಳನ್ನು ಯಾರು ಬಿಟ್ಟುಕೊಟ್ಟಿದ್ದಾರೆ ಹಾಗೂ ದೇಶವನ್ನು ಯಾರು ಮಾರಾಟ ಮಾಡಿದ್ದಾರೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ' ಎಂದರು.

'2013ರಲ್ಲಿ ಬಾಲಿಯಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಸಮಾವೇಶ ನಡೆದಾಗ, ಕಾಂಗ್ರೆಸ್‌ ನೇತೃತ್ವದ ಅಂದಿನ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿತು' ಎಂದು ಹೇಳಿದರು.

'ಈ ಒಪ್ಪಂದದ ಪ್ರಕಾರ, ಆಹಾರ ಧಾನ್ಯಗಳ ಮೇಲೆ ಸರ್ಕಾರ ನಿಯಂತ್ರಣ ಹೊಂದಿರಲಿಲ್ಲ. 2017ರಿಂದ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ಅವಕಾಶ ಇರಲಿಲ್ಲ. ಹಾಗೆಯೇ, ಬಡವರಿಗೆ ಪಡಿತರ ನೀಡುವುದಕ್ಕೂ ಅವಕಾಶ ಇರಲಿಲ್ಲ ಎಂಬುದು ಇದರ ಅರ್ಥ' ಎಂದು ವಿವರಿಸಿದರು.

'ಈ ವಿಚಾರ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರು 2014ರಲ್ಲಿ ಡಬ್ಲುಟಿಒ ಜೊತೆ ಹೋರಾಟ ನಡೆಸಿದರು. ಹಾಗೆ ಮಾಡದಿದ್ದಲ್ಲಿ, ಈ ದೇಶದ ಬಡವರಿಗೆ ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯ ನೀಡುವುದಕ್ಕೆ ಸಾಧ್ಯವಿರುತ್ತಿರಲಿಲ್ಲ' ಎಂದು ಹೇಳಿದರು.

'2009ರಲ್ಲಿ ಒಪ್ಪಂದ':

'ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದರೂ ಕೇಂದ್ರ ಸರ್ಕಾರ ಈ ಕುರಿತು ಚಕಾರ' ಎತ್ತುತ್ತಿಲ್ಲ ಎಂಬ ರಾಹುಲ್‌ ಗಾಂಧಿ ಆರೋಪ ಪ್ರಸ್ತಾಪಿಸಿದ ಸಚಿವೆ ನಿರ್ಮಲಾ ಸೀತಾರಾಮನ್, 'ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 2009ರಲ್ಲಿ ಈಜಿಪ್ಟ್‌ನ ಶರ್ಮ್‌ ಎಲ್‌ ಶೇಖ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಪಾಕಿಸ್ತಾನ ಜೊತೆ ಮಾತುಕತೆ ನಡೆಸುವ ವೇಳೆ ಭಯೋತ್ಪಾದನೆ ಕುರಿತು ಪ್ರಸ್ತಾಪ ಮಾಡಬಾರದು ಎಂಬ ಅಂಶವನ್ನು ಈ ಒಪ್ಪಂದ ಒಳಗೊಂಡಿತ್ತು' ಎಂದು ತಿರುಗೇಟು ನೀಡಿದರು.

ಟಿಎಂಸಿಗೂ ತಿವಿದ ಸಚಿವೆ

ಪಶ್ಚಿಮ ಬಂಗಾಳಕ್ಕೆ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎಂಬ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಆರೋಪಕ್ಕೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್‌, 'ಪೂರ್ವ ಭಾಗದ ರಾಜ್ಯಗಳಿಗೆ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ. ಪಶ್ಚಿಮ ಬಂಗಾಳ ಕೂಡ ಈ ಯೋಜನೆಗಳ ಲಾಭ ಪಡೆಯಲು ಪ್ರಯತ್ನಿಸಬೇಕಿತ್ತು' ಎಂದರು.

'ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಅಂತ್ಯಕ್ರಿಯೆ ಸೇವೆಗಳ ಮೇಲೂ ಜಿಎಸ್‌ಟಿ ಹೇರಲಾಗಿದೆ ಎಂಬ ಬ್ಯಾನರ್ಜಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ' ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಟಿಎಂಸಿ ಸಂಸದರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರ ಮಧ್ಯೆಯೇ ಮಾತು ಮುಂದುವರಿಸಿದ ಸಚಿವೆ, 'ಜನಸಾಮಾನ್ಯರಿಗೆ ಜಿಎಸ್‌ಟಿಯಿಂದ ತೊಂದರೆಯಾಗುತ್ತಿಲ್ಲ. ಟಿಎಂಸಿಯ 'ಕಟ್‌ ಮನಿ ಸಿಂಡಿಕೇಟ್‌'ನಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries