ಕಾಸರಗೋಡು: ಆರ್ಥಿಕ ವರ್ಷ ಅಂತ್ಯಗೊಳ್ಳಲು ತಿಂಗಳು ಮಾತ್ರ ಬಾಕಿ ಉಳಿದಿರುವಂತೆ ರಾಜ್ಯ ಖಜಾನೆಗಳ ಮೇಲೆ ಅಘೋಷಿತ ನಿಯಂತ್ರಣದ ಹಿನ್ನೆಲೆಯಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಿಲ್ ಮಂಜೂರಾಗದಿರುವುದರಿಂದ ಸರ್ಕಾರಿ ಗುತ್ತಿಗೆದಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಈ ಬಿಕ್ಕಟ್ಟಿನಿಂದ ಪಾರುಮಾಡಲು ಸರ್ಕಾರ ಮುಂದಾಗಬೇಕು ಎಂದು ಕೇರಳ ಸರ್ಕಾರಿ ಗುತ್ತಿಗೆದಾರರ ಸಂಘದ (ಎಕೆಜಿಸಿಎ) ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಎ. ನಾಸರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಲೆ ಏರಿಕೆ ಮತ್ತು ನಿರ್ಮಾಣ ಸಾಮಗ್ರಿಗಳ ಕೊರತೆಯು ಮಾರ್ಚ್‍ನಲ್ಲಿ ಪೂರ್ಣಗೊಳ್ಳುವ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲಿ, ನಿರ್ಮಾಣ ಸಾಮಗ್ರಿಗಳಿಗಾಗಿ ಇತರ ರಾಜ್ಯಗಳನ್ನು ಅವಲಂಬಿಸಬೇಕಾಗಿದೆ. ಇದು ವೆಚ್ಚದಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.
ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವವರಿಗೆ ಸಂಸ್ಕರಣಾ ಶುಲ್ಕ ಮತ್ತು 'ಇ' ಟೆಂಡರ್ ಶುಲ್ಕದಲ್ಲಿ ಅನ್ಯಾಯದ ಹೆಚ್ಚಳವು ಗುತ್ತಿಗೆದಾರರ ಪಾಲಿಗೆ ಕರಾಳ ಪರಿಸ್ಥಿತಿಯನ್ನು ಉಂಟುಮಾಡಿದೆ. ಜಲಜೀವನ್ ಗುತ್ತಿಗೆದಾರರಿಗೆ ಕಳೆದ ಕೆಲವು ವರ್ಷಗಳಿಂದ ವಿವಿಧ ಕಾಮಗಾರಿಯಲ್ಲಿ ಹಲವುಕೋಟಿ ರೂ. ಮೊತ್ತ ಲಭಿಸಲು ಬಾಕಿ ಉಳಿಸಿಕೊಂಡಿದೆ. ಜಲಜೀವನ್ ಮಿಷನ್‍ಗಾಗಿ ಮಂಜೂರಾದ ನಬಾರ್ಡ್ ಫಂಡನ್ನೂ ಬೇರೆಡೆಗೆ ತಿರುಗಿಸಿ ಖರ್ಚು ಮಾಡಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೈಗೊಂಡಿರುವ ಕೆಲಸಗಳಿಗೆ ಗುತ್ತಿಗೆದಾರರಿಗೆ ಲಭಿಸಬೇಕಾದ ಬಿಲ್‍ಗಳು ವಿವಿಧ ಕಾರಣಗಳಿಂದ ವಿಳಂಬವಾಗುತ್ತಿದೆ. ಇಂತಹ ಸಮಸ್ಯೆ ಕೊನೆಗೊಳಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಖಜಾನೆ ನಿಯಂತ್ರಣ ತೆಗೆದುಹಾಕಬೇಕು, ಬಾಕಿ ಇರುವ ಬಿಲ್‍ಗಳನ್ನು ಮಂಜೂರುಗೊಳಿಸಬೇಕು, ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಾಸಿರ್ ಚೆಂಗಳ, ಹನೀಫ್ ಪೈವಳಿಕೆ, ನೌಶಾದ್ ಎಂ.ಎಂ., ಮಜೀದ್ ಬೆಂಡಿಚ್ಚಾಲ್ ಉಪಸ್ಥಿತರಿದ್ದರು.



