ಕಾಸರಗೋಡು: ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಮೂರು ಮಂದಿಯನ್ನು ಕೊಯಂಬತ್ತೂರಿನ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ಮುಂಡಕಂಡ ನಿವಸಿ ನಿತಿನ್, ನೀಲೇಶ್ವರ ಚತಮತ್ ನಿವಾಸಿ ಶ್ರೀಕುಮಾರ್ ಹಾಗೂ ಪಳ್ಳಿಕೆರೆ ನಿವಾಸಿ ಸುಧೀಶ್ ಬಂಧಿತರು. ಇವರಿಂದ 20ಸಾವಿರ ರೂ.ನಗದು,ಸಂಚಾರಕ್ಕೆಬಳಸಿದ್ದ ಕಾರುಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚಿನ್ನ ವ್ಯಾಪಾರಿ ಪಟ್ಟಾಂಬಿ ನಡುವಟ್ಟಂ ನಿವಾಸಿ ಲುಕ್ಮಾನ್ ಮಹಮ್ಮದ್ ಎಂಬವರನ್ನು ಅಪಹರಿಸಿ 41ಲಕ್ಷ ರೂ. ದರೋಡೆ ನಡೆಸಿದ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಚಿನ್ನ ಮಾರಾಟಮಾಡಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವ ಹಾದಿಮಧ್ಯೆ, ಫೆ.19ರಂದು ಕಾರಿನಲ್ಲಿ ಆಗಮಿಸಿದ ತಂಡ ಸ್ಕೂಟರ್ ತಡೆದು ಬಲವಂತವಾಗಿ ಕಾರಿಗೇರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಣ,ಮೊಬೈಲ್ ಕಸಿದು ತನ್ನನ್ನು ಅಲ್ಲೇ ಬಿಟ್ಟು ತಂಡ ಪರಾರಿಯಾಗಿರುವುದಾಗಿ ಲುಕ್ಮಾನ್ ಮಹಮ್ಮದ್ ನೀಡಿದ ದೂರಿನಲ್ಲಿ ತಿಳಿಸಿದ್ದರು.


