ಜೆರುಸಲೇಂ: ಅಮೆರಿಕ ಈ ವಾರ ಪಶ್ಚಿಮದಂಡೆಯ ವಸಾಹತುಗಳಲ್ಲಿ ಸ್ಥಳದಲ್ಲಿಯೇ ಪಾಸ್‍ಪೋರ್ಟ್ ಸೇವೆಗಳನ್ನು ಒದಗಿಸುತ್ತದೆ. ಆಕ್ರಮಿತ ಪ್ರದೇಶದಲ್ಲಿ ವಸಾಹತುಗಾರರಿಗೆ ಇದೇ ಮೊದಲ ಬಾರಿ ಅಮೆರಿಕದ ಕಾನ್ಸುಲರ್ ಅಧಿಕಾರಿಗಳು ಈ ರೀತಿಯ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಇಸ್ರೇಲ್‍ನಲ್ಲಿನ ಅಮೆರಿಕ ರಾಯಭಾರಿ ಕಚೇರಿ ಘೋಷಿಸಿದೆ.
ಶುಕ್ರವಾರ ಜೆರುಸಲೇಂನ ಎಫ್ರಾತ್ ವಸಾಹತುಗಳಲ್ಲಿನ ಅಮೆರಿಕನ್ ಪ್ರಜೆಗಳಿಗೆ ಪಾಸ್‍ಪೋರ್ಟ್ ಸೇವೆಯನ್ನು ಒದಗಿಸುವ ಕಾರ್ಯಕ್ರಮವಿದೆ. ಇದು ಎಲ್ಲಾ ಅಮೆರಿಕನ್ ಪ್ರಜೆಗಳನ್ನು ತಲುಪುವ `ಫ್ರೀಡಮ್ 250' ಉಪಕ್ರಮದ ಭಾಗವಾಗಿದೆ ಎಂದು ರಾಯಭಾರಿ ಕಚೇರಿ ಹೇಳಿದೆ.
ಇದು ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ವಸಾಹತುಗಳನ್ನು ಕಾನೂನುಬದ್ಧಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಮತ್ತಷ್ಟು ಕ್ರಮಗಳನ್ನು ಸೂಚಿಸುತ್ತದೆ ಮತ್ತು ಪಶ್ಚಿಮದಂಡೆಯಲ್ಲಿ ಇಸ್ರೇಲಿ ವಸಾಹತುಗಳು ಶಾಂತಿಗೆ ಅಡ್ಡಿಯಾಗಿವೆ ಎಂಬ ಅಮೆರಿಕದ ವಿದೇಶಾಂಗ ನೀತಿಯನ್ನು ಮುರಿದಿದೆ. ಫೆಲೆಸ್ತೀನಿಯನ್ ನಗರ ರಮಲ್ಲಾ, ಪಶ್ಚಿಮದಂಡೆಯ ಬೀಟಾರ್ ಇಲ್ಲಿಟ್‍ನ ವಸಾಹತು, ಜೆರುಸಲೇಂ, ಹೈಫಾ, ನೆತನ್ಯಾ ಮತ್ತು ಬೀಟ್ ಶೆಮೆಶ್ ನಗರಗಳಲ್ಲಿಯೂ ಕಾನ್ಸುಲರ್ ಕಾರ್ಯಕ್ರಮಗಳು ನಡೆಯಲಿವೆ. ಆದರೆ ದಿನಾಂಕವನ್ನು ಘೋಷಿಸಲಾಗಿಲ್ಲ. `ಪಶ್ಚಿಮದಂಡೆಯಲ್ಲಿ ಅಮೆರಿಕನ್ ಪ್ರಜೆಗಳಿಗೆ ಕಾನ್ಸುಲರ್ ಸೇವೆಗಳನ್ನು ವಿಸ್ತರಿಸುವ ಐತಿಹಾಸಿಕ ನಿರ್ಧಾರವನ್ನು' ಸ್ವಾಗತಿಸುವುದಾಗಿ ಇಸ್ರೇಲ್ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

