ಬನ್ಸಲ್ ಅವರ ಎರಡು ದಿನಗಳ ಐಷಾರಾಮಿ ಪ್ರವಾಸ ಕಾರ್ಯಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.
'ಇದು ಅನುಚಿತ ಮತ್ತು ಸ್ಥಾಪಿತ ನಿಯಮಗಳು ಹಾಗೂ ಪರಂಪರೆಗಳ ಉಲ್ಲಂಘನೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ, ಇದು ಆಘಾತಕಾರಿಯಾಗಿದೆ. ಈ ಸಂಬಂಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು' ಎಂದು ಸಿಂದಿಯಾ ಹೇಳಿದರು.
50 ಅಧಿಕಾರಿಗಳ ನಿಯೋಜನೆ,ಎಂಟು ಬಾತ್ ಕಿಟ್‌ಗಳ ವ್ಯವಸ್ಥೆ:
87ನೇ ಬ್ಯಾಚ್‌ನ ದೂರಸಂಪರ್ಕ ಸೇವಾ ಅಧಿಕಾರಿಯಾಗಿದ್ದು 35 ವರ್ಷಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿರುವ ಬನ್ಸಲ್ ಅವರ ಎರಡು ದಿನಗಳ ಪ್ರಯಾಗರಾಜ್ ಪ್ರವಾಸ ಯೋಜನೆ ಎಲ್ಲ ತಪ್ಪು ಕಾರಣಗಳಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದು ಬನ್ಸಲ್ ಅವರ ಎರಡು ದಿನಗಳ ವಾಸ್ತವಕ್ಕಾಗಿ ಸೂಚಿಸಲಾಗಿದ್ದ ಅತ್ಯಂತ ಅದ್ದೂರಿಯ ವ್ಯವಸ್ಥೆಗಳು.
ಆನ್‌ಲೈನ್‌ನಲ್ಲಿ ಹರಿದಾಡಿದ 21 ಅಂಶಗಳ ದಾಖಲೆಯ ಪ್ರಕಾರ ಕಿರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಇಂಜಿನಿಯರ್‌ಗಳಿಂದ ಹಿಡಿದು ಉಪವಿಭಾಗೀಯ ಮತ್ತು ವಿಭಾಗೀಯ ಇಂಜಿನಿಯರ್‌ಗಳವರೆಗೆ ಸುಮಾರು 50 ಅಧಿಕಾರಿಗಳನ್ನು ಬನ್ಸಲ್ ಸೇವೆಗೆ ನಿಯೋಜಿಸಲಾಗಿತ್ತು.
ಸಂಗಮದಲ್ಲಿ ಸ್ನಾನ ಮಾಡುವುದರಿಂದ ಹಿಡಿದು ಹನುಮಾನ್ ದೇವಸ್ಥಾನ, ಅಕ್ಷಯವಟ ಮತ್ತು ಪಾತಾಲಪುರಿ ಮಂದಿರಗಳಿಗೆ ಭೇಟಿಗಳವರೆಗೆ ಅವರ 'ಸೌಕರ್ಯ'ವನ್ನು ಖಚಿತಪಡಿಸಿಕೊಳ್ಳಲು ವಿವರವಾದ ವ್ಯವಸ್ಥೆಗಳಿಗಾಗಿ ಆದೇಶದಲ್ಲಿ ಸೂಚಿಸಲಾಗಿತ್ತು.
ತಲೆಗೂದಲ ಎಣ್ಣೆ, ಒಳಉಡುಪುಗಳು, ಬಾಚಣಿಕೆಗಳು, ಟೂತ್‌ಪೇಸ್ಟ್, ಶೇವಿಂಗ್ ಕಿಟ್‌ಗಳು ಮತ್ತು ಚಪ್ಪಲಿಗಳ ವ್ಯವಸ್ಥೆಗಳು ವಿವರಗಳಲ್ಲಿ ಸೇರಿವೆ. ಪುರುಷರಿಗಾಗಿ ಆರು ಮತ್ತು ಮಹಿಳೆಯರಿಗಾಗಿ ಎರಡು, ಹೀಗೆ ಒಟ್ಟು ಎಂಟು ಸ್ನಾನದ ಕಿಟ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಸ್ನಾನದ ನಂತರದ ವ್ಯವಸ್ಥೆಗಳ ಮೇಲ್ವಿಚಾರಣೆಯನ್ನು ಹಿರಿಯ ಅಧಿಕಾರಿಯೋರ್ವರಿಗೆ ವಹಿಸಲಾಗಿತ್ತು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

