ಇಸ್ಲಮಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಇಸ್ರೇಲ್ ಭೇಟಿಗೆ ಪಾಕಿಸ್ತಾನದ ರಾಜಕೀಯ ವಲಯ ಮತ್ತು ಮಾಧ್ಯಮಗಳಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಸ್ರೇಲ್ ಮತ್ತು ಹೊಸದಿಲ್ಲಿ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಸರಕಾರ ಕಳವಳ ವ್ಯಕ್ತಪಡಿಸಿದೆ.
ಭಾರತ ಮತ್ತು ಇತರ ದೇಶಗಳೊಂದಿಗೆ ಪ್ರಾದೇಶಿಕ ಮೈತ್ರಿ ಸಾಧಿಸುವ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಹೇಳಿಕೆಯನ್ನು ಖಂಡಿಸುವ ನಿರ್ಣಯವನ್ನು ಪಾಕಿಸ್ತಾನದ ಸಂಸತ್ತು ಅವಿರೋಧವಾಗಿ ಅಂಗೀಕರಿಸಿದ್ದು ಇದು ಮುಸ್ಲಿಮ್ ರಾಷ್ಟ್ರಗಳ ವಿರುದ್ದದ ಪಿತೂರಿಯಾಗಿದೆ ಎಂದು ಸಂಸದರು ಟೀಕಿಸಿದ್ದಾರೆ. `ಪ್ರಸ್ತಾವಿತ ಒಕ್ಕೂಟವು ಪ್ರಾದೇಶಿಕ ಶಾಂತಿ ಮತ್ತು ಜಾಗತಿಕ ಸ್ಥಿರತೆಗೆ ಬೆದರಿಕೆಯಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದ್ದು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಇಸ್ರೇಲ್ ಬಣಗಳನ್ನು ರೂಪಿಸಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.
ಪಾಕಿಸ್ತಾನದ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಇಸ್ರೇಲ್ ಭೇಟಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಭಾರತ- ಇಸ್ರೇಲ್ ಸಹಭಾಗಿತ್ವವು ಪಾಕಿಸ್ತಾನ ಮತ್ತು ಚೀನಾವನ್ನು ಗುರಿಯಾಗಿಸಿದ ಕಾರ್ಯತಂತ್ರದ ಉಪಕ್ರಮವಾಗಿದೆ. ಎರಡು ದೇಶಗಳ ನಡುವಿನ ರಕ್ಷಣಾ ಮತ್ತು ಗುಪ್ತಚರ ಸಂಬಂಧಗಳನ್ನು ವಿಸ್ತರಿಸುವುದರಿಂದ ಪ್ರಾದೇಶಿಕ ಶಕ್ತಿಯ ಸಮತೋಲನ ಬದಲಾಗಬಹುದು ಎಂದು ಪ್ರತಿಪಾದಿಸಲಾಗಿದೆ.

