ಕರಾಕಸ್: ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರು ಶುಕ್ರವಾರ ಕ್ಷಮಾದಾನ ಮಸೂದೆಯನ್ನು ಘೋಷಿಸಿದ್ದಾರೆ.
ರಾಜಕೀಯ ಕಾರಣಗಳಿಗಾಗಿ ಬಂಧನದಲ್ಲಿರುವ ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ ನೂರಾರು ಕೈದಿಗಳು ಬಿಡುಗಡೆ ಆಗುವ ಸಾಧ್ಯತೆಯಿದೆ.
ಇದು ಅಮೆರಿಕ ಬೆಂಬಲಿತ ವಿರೋಧ ಪಕ್ಷದ ಬಹು ದಿನಗಳ ಬೇಡಿಕೆಯಾಗಿತ್ತು.
ಜನವರಿ 3ರಂದು ಅಮೆರಿಕದ ಪಡೆಗಳು ಮಿಂಚಿನ ಕಾರ್ಯಾಚರಣೆ ನಡೆಸಿ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೊರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದು, ನ್ಯೂಯಾರ್ಕ್‌ಗೆ ಕರೆದೊಯ್ದ ನಂತರ, ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾಡ್ರಿಗಸ್ ಈ ಮಸೂದೆ ತರುವುದಾಗಿ ಹೇಳಿದ್ದರು.
ನ್ಯಾಯಮೂರ್ತಿಗಳು, ಸಚಿವರು, ಸೇನಾ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಅವರು ಶುಕ್ರವಾರ ಈ ಕುರಿತು ಘೋಷಿಸಿದರು. ಈ ಮಸೂದೆಯನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತುರ್ತಾಗಿ ಮಂಡಿಸಲಾಗುತ್ತದೆ ಎಂದೂ ತಿಳಿಸಿದರು.
ದೇಶದಲ್ಲಿ ನ್ಯಾಯ ಮತ್ತು ಸಹಬಾಳ್ವೆಯನ್ನು ಮರು ಸ್ಥಾಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದರು.
ಅಂದಾಜಿನ ಪ್ರಕಾರ, ವೆನೆಜುವೆಲಾದಲ್ಲಿ 711 ಕೈದಿಗಳು ಬಂಧನ ಕೇಂದ್ರಗಳಲ್ಲಿದ್ದು, ಅವರಲ್ಲಿ 183 ಮಂದಿಗೆ ಶಿಕ್ಷೆಯಾಗಿದೆ ಎಂದು ಮೂಲಗಳು ತಿಳಿಸಿವೆ.

