ದೋಸೆ ಹಿಟ್ಟಿಗೆ ಮೊಸರು ಬೆರೆಸಿ ಹೀಗೆ ಮಾಡಿ ನೋಡಿ! ಬಾಯಲ್ಲಿ ಇಟ್ಟರೆ ಕರಗುವ ದೋಸೆ ರೆಡಿ.. ಮೃದುವಾಗಿ ಬರಲು ಈ ಸೀಕ್ರೆಟ್ ಟಿಪ್ಸ್ ಫಾಲೋ ಮಾಡಿ. ಹೌದು, ಪದೇ ಪದೆ ಬ್ರೇಕ್‌ಫಾಸ್ಟ್‌ಗೆ ಏನು ಮಾಡುವುದು? ಎಂಬ ಪ್ರಶ್ನೆ ಗೃಹಿಣಿಯರಿಗೆ ಎದುರಾಗುತ್ತೆ. ಮಕ್ಕಳು ಮತ್ತು ವಯಸ್ಕರು ಇಬ್ಬರೂ ಮೆಚ್ಚುವ, ಪೌಷ್ಟಿಕ ತಿಂಡಿ ತಯಾರಿಸುವುದು ನಿಜಕ್ಕೂ ಸವಾಲೇ ಸರಿ.
ಇಂತಹ ಸಂದರ್ಭದಲ್ಲಿ, ಸಾಮಾನ್ಯ ದೋಸೆಗಿಂತ ವಿಭಿನ್ನವಾಗಿ, ಅತಿ ಮೃದು ಮತ್ತು ರುಚಿಕರವಾದ ಮೊಸರು ದೋಸೆ (Curd Dosa) ಅತ್ಯುತ್ತಮ ಆಯ್ಕೆಯಾಗಬಲ್ಲದು. ಕಡಿಮೆ ಎಣ್ಣೆ ಬಳಸಿ ತಯಾರಿಸುವ ಈ ಕರ್ಡ್ ದೋಸೆ ಸುಲಭವಾಗಿ ಜೀರ್ಣವಾಗುತ್ತದೆ. ಇದು ದಿನವಿಡೀ ನಿಮ್ಮನ್ನು ಉತ್ಸಾಹದಲ್ಲಿಡಲು ಸಹಕಾರಿ.
ಅಕ್ಕಿ, ಅವಲಕ್ಕಿ ಮತ್ತು ಮೊಸರಿನಲ್ಲಿ ನೆನೆಸಿ ಮಾಡುವ ಈ ಸ್ಪಂಜಿನಂತಹ ದೋಸೆ ಆರೋಗ್ಯಕರ ಮಾತ್ರವಲ್ಲ, ಮಕ್ಕಳ ಲಂಚ್ ಬಾಕ್ಸಿಗೂ ಪರಿಪೂರ್ಣ. ಹೋಟೆಲ್ ರುಚಿಯನ್ನೇ ಮರೆಸುವ ಈ ದೋಸೆಯ ಸರಳ ರೆಸಿಪಿ (Curd Dosa Recipe) ಮತ್ತು ಬೇಕಾಗುವ ಸಾಮಗ್ರಿಗಳು ಇಲ್ಲಿವೆ.
ಮೊಸರು ದೋಸೆಯ ವಿಶೇಷತೆಗಳು
- ಈ ದೋಸೆ ಸ್ಪಂಜಿನಂತೆ ಮೃದುವಾಗಿರುತ್ತದೆ. ಹಾಗಾಗಿ, ಹಲ್ಲು ಇಲ್ಲದ ವಯಸ್ಸಾದವರಿಗೂ ಮತ್ತು ಪುಟ್ಟ ಮಕ್ಕಳಿಗೂ ಇದನ್ನು ಸೇವಿಸುವುದು ಸುಲಭ. ಎಲ್ಲರಿಗೂ ಇಷ್ಟವಾಗುತ್ತದೆ.
- ಮೊಸರಿನಲ್ಲಿರುವ ಪ್ರೋಬಯಾಟಿಕ್ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ ಹಾಗೂ ಹೊಟ್ಟೆಗೆ ತಂಪು ನೀಡುತ್ತವೆ. ಇದು ಆರೋಗ್ಯಕ್ಕೆ ಬಹು ಉಪಕಾರಿಯಾದ ಉಪಹಾರ.
- ತಣ್ಣಗಾದ ಮೇಲೂ ಮೊಸರು ದೋಸೆ ತನ್ನ ಮೃದುತ್ವವನ್ನು ಕಳೆದುಕೊಳ್ಳುವುದಿಲ್ಲ. ಶಾಲಾ ಮಕ್ಕಳ ಲಂಚ್ ಬಾಕ್ಸ್‌ಗೆ ಪ್ಯಾಕ್ ಮಾಡಲು ಇದು ಅತ್ಯುತ್ತಮ ಖಾದ್ಯವಾಗಿದೆ.
ಮೊಸರು ದೋಸೆಗೆ ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ (ಅಥವಾ ಸೋನಾ ಮಸೂರಿ)
• ಅವಲಕ್ಕಿ (ದಪ್ಪ ಅಥವಾ ತೆಳು)
• ಉದ್ದಿನಬೇಳೆ
• ಮೆಂತೆ ಕಾಳು
• ಮೊಸರು (ಸ್ವಲ್ಪ ಹುಳಿ ಇರುವ ಮೊಸರು)
• ರುಚಿಗೆ ತಕ್ಕಷ್ಟು ಉಪ್ಪು
• ಸಕ್ಕರೆ
• ಎಣ್ಣೆ ಅಥವಾ ಬೆಣ್ಣೆ
ಮೊಸರು ದೋಸೆತಯಾರಿಸುವ ವಿಧಾನ
- ಮೊದಲಿಗೆ, ಒಂದು ಬಟ್ಟಲಿನಲ್ಲಿ ಅಕ್ಕಿ, ಉದ್ದಿನಬೇಳೆ ಮತ್ತು ಮೆಂತೆ ಕಾಳುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇನ್ನೊಂದು ಬಟ್ಟಲಿನಲ್ಲಿ ಅವಲಕ್ಕಿಯನ್ನು ಪ್ರತ್ಯೇಕವಾಗಿ ತೊಳೆಯಿರಿ.
- ಈಗ ಒಂದು ದೊಡ್ಡ ಪಾತ್ರೆಯಲ್ಲಿ ಅರ್ಧ ಕಪ್ ಮೊಸರು ಹಾಕಿ, ಅದಕ್ಕೆ ತೊಳೆದ ಅಕ್ಕಿ, ಬೇಳೆ, ಮೆಂತೆ ಮತ್ತು ಅವಲಕ್ಕಿ ಮಿಶ್ರಣವನ್ನು ಸೇರಿಸಿ.
- ಇವುಗಳನ್ನು ಸುಮಾರು ಏಳು ಗಂಟೆಗಳ ಕಾಲ ಚೆನ್ನಾಗಿ ನೆನೆಯಲು ಬಿಡಿ. ಮೊಸರಿನಲ್ಲಿ ನೆನೆಯುವುದರಿಂದ ದೋಸೆ ಮೃದುವಾಗುತ್ತದೆ.
- ನೆನೆದಿರುವ ಅಕ್ಕಿ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
- ಸಕ್ಕರೆ ಉಪಯೋಗಿಸುವುದರಿಂದ ದೋಸೆ ಸುಡುವಾಗ ಸುಂದರವಾದ ಕೆಂಪು ಬಣ್ಣ ಬರುತ್ತದೆ. ರುಬ್ಬಿದ ಈ ಹಿಟ್ಟನ್ನು ಮತ್ತೆ ಆರು ಗಂಟೆಗಳ ಕಾಲ ಹುದುಗು ಬರಲು ಬಿಡುವುದು ದೋಸೆಯ ಗುಣಮಟ್ಟಕ್ಕೆ ಮುಖ್ಯ.
- ಮಧ್ಯಮ ಉರಿಯಲ್ಲಿ ದೋಸೆ ಹಂಚನ್ನು ಚೆನ್ನಾಗಿ ಬಿಸಿ ಮಾಡಿ, ಅದರ ಮೇಲೆ ಸ್ವಲ್ಪ ಎಣ್ಣೆ ಸವರಿ. ಒಂದು ಸೌಟು ಹಿಟ್ಟನ್ನು ಹಂಚಿನ ಮಧ್ಯದಲ್ಲಿ ಹಾಕಿ ಸ್ವಲ್ಪ ದಪ್ಪವಾಗಿ ಹರಡಿ.
- ಈ ಮೊಸರು ದೋಸೆಯು ಅತಿ ತೆಳ್ಳಗೆ ಇರಬಾರದು ಎಂಬುದನ್ನು ಗಮನಿಸಿ. ದೋಸೆಯ ಮೇಲೆ ಸಣ್ಣ ರಂಧ್ರಗಳು ಕಾಣಿಸಿಕೊಂಡರೆ ಹಿಟ್ಟು ಚೆನ್ನಾಗಿ ಹುದುಗು ಬಂದಿರುತ್ತದೆ.
- ದೋಸೆಯನ್ನು ಒಂದು ಪ್ಲೇಟ್‌ನಿಂದ ಮುಚ್ಚಿ ಸುಮಾರು ಒಂದು ನಿಮಿಷ ಬೇಯಿಸಿ. ನಂತರ ಮುಚ್ಚಳ ತೆಗೆದು ದೋಸೆಯ ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ.
- ದೋಸೆ ಕೆಂಪು ಬಣ್ಣಕ್ಕೆ ತಿರುಗಿದಾಗ, ಬೇಕಿದ್ದರೆ ಮಗುಚಿ ಹಾಕಿ ಇನ್ನೊಂದು ಬದಿಯೂ ಸುಡಬಹುದು. ಮೊಸರು ದೋಸೆಯನ್ನು ಸಾಮಾನ್ಯವಾಗಿ ಒಂದು ಬದಿ ಮಾತ್ರ ಸುಟ್ಟು ಬಡಿಸುವುದು ರೂಢಿಯಲ್ಲಿದೆ.
- ಬಿಸಿಬಿಸಿಯಾದ ಮೊಸರು ದೋಸೆಯನ್ನು ತೆಂಗಿನಕಾಯಿ ಚಟ್ನಿ, ಕೆಂಪು ಚಟ್ನಿ ಅಥವಾ ಆಲೂಗಡ್ಡೆ ಪಲ್ಯದಂತಹ ಮೆಚ್ಚಿನ ಸೈಡ್ ಡಿಶ್‌ಗಳೊಂದಿಗೆ ಸವಿಯಿರಿ.

