ಮುಂಬೈ: 'ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರು, ತಮ್ಮ ಬಳಿ 'ಬಿಜೆಪಿ ಹಗರಣ'ಗಳ ಕಡತ ಇದೆ ಎಂದು ಹೇಳುತ್ತಿದ್ದರು. ಆನಂತರ ನಡೆದ ಘಟನೆಗಳು ನಿಗೂಢವಾಗಿವೆ' ಎಂದು ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಹೇಳಿದರು.
ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, 'ಅಜಿತ್ ಪವಾರ್ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾಗಲು ನಿರ್ಧರಿಸಿದ್ದರು.
'ಬಿಜೆಪಿ ಹಗರಣಕ್ಕೆ ಸಂಬಂಧಿಸಿದ ಕಡತಗಳಿವೆ, ಇವುಗಳನ್ನು ಬಹಿರಂಗಪಡಿಸುತ್ತೇನೆ' ಎಂದು ಪದೇ ಪದೇ ಹೇಳುತ್ತಿದ್ದರು. ಜನವರಿ 15ರಂದು ಹೀಗೆ ಹೇಳಿದ್ದರು. ಅದಾದ 10 ದಿನಗಳಲ್ಲಿ ವಿಮಾನ ದುರಂತ ನಡೆದಿದೆ. ಇದು ನಿಜಕ್ಕೂ ನಿಗೂಢವಾಗಿದೆ' ಎಂದು ಹೇಳಿದರು.
'ಅಜಿತ್ ಪವಾರ್ ಅವರಿದ್ದ ವಿಮಾನದಲ್ಲಿ ಬೇರೆ ಯಾವುದೇ ಮುಖ್ಯ ವ್ಯಕ್ತಿ ಇರಲಿಲ್ಲ. ವಿಮಾನವು ನಿರ್ವಹಣೆ ಪ್ರಮಾಣಪತ್ರವನ್ನೂ ಹೊಂದಿರಲಿಲ್ಲ ಎಂಬುದು ಶಂಕಾಸ್ಪದವಾಗಿದೆ. ಅಜಿತ್ ಪವಾರ್ ಅವರು ಸ್ವಪಕ್ಷಕ್ಕೆ ಮರಳಿದ್ದರೆ, ಅದು ಬಿಜೆಪಿಯ ಸೋಲಿಗೆ ಕಾರಣವಾಗುತ್ತಿತ್ತು. ದೇಶದ ರಾಜಕೀಯದಲ್ಲಿ ಪರಿವರ್ತನೆಗೆ ಮುನ್ನುಡಿಯಾಗುತ್ತಿತ್ತು' ಎಂದರು.
ಕಾಂಗ್ರೆಸ್ ನಾಯಕರಿಗೂ ಅನುಮಾನ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ವಿಜಯ್ ವಡೆಟ್ಟೀವಾರ್ ಅವರು, 'ಕೊನೇ ಗಳಿಗೆಯಲ್ಲಿ ಪೈಟಲ್ ಬದಲಾವಣೆ ಮಾಡಿದ್ದು ಏಕೆ? ಎನ್‌ಸಿಪಿ ನಾಯಕರು ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಬೇಕು. ಇದು ಕೇವಲ ಅವಘಡವಲ್ಲ, ಇದರ ಹಿಂದೆ ಪಿತೂರಿ ಇದೆ' ಎಂದು ಹೇಳಿದರು.
ಅಜಿತ್ ಪವಾರ್ ಅವರು ಜನವರಿ 28ರಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅವಘಡ ನಡೆದ ದಿನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಅಜಿತ್ ಪವಾರ್ ಅವರ ಸಾವಿನ ಹಿಂದೆ ಪಿತೂರಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು 'ಇದೊಂದು ಅವಘಡ' ಎನ್ನುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದರು.

