ಕಾಸರಗೋಡು: ಯಾಂತ್ರಿಕ ತಕರಾರಿನಿಂದ ಸಮುದ್ರ ಮಧ್ಯೆ ಸ್ಥಗಿತಗೊಂಡಿದ್ದ ದೋಣಿಯಲ್ಲಿದ್ದ ಮೀನು ಕಾರ್ಮಿಕರನ್ನು ಕುಂಬಳೆ ಠಾಣೆ ಪೊಲೀಸರು ಮತ್ತು ನಾಗರಿಕರು ರಕ್ಷಿಸಿದ್ದಾರೆ. ತಮಿಳ್ನಾಡು ನಿವಾಸಿ ಮೈಕೆಲ್, ಸತೀಶ್ ಎಂಬವರು ಅಪಾಯದಿಂದ ಪಾರಾದ ಮೀನುಗಾರರು. ಮಂಗಳೂರಿನ ಶಾಹುಲ್‍ಹಮೀದ್ ಎಂಬವರ ಮಾಲಿಕತ್ವದ ದೋಣಿ ಇದಾಗಿದ್ದು, ಮೀನುಗಾರಿಕೆ ಮಧ್ಯೆ ಯಂತ್ರದಲ್ಲಿ ತಕರಾರು ಕಾಣಿಸಿಕೊಂಡು, ದೋಣಿಯನ್ನು ನಿಯಂತ್ರಿಸಲಾಗದೆ ಸಹಾಯಕ್ಕಾಗಿ ಇತರ ದೋಣಿಯಲ್ಲಿದ್ದವರಿಗೆ ಮೊರೆಹೋಗಿದ್ದರು. ತಕ್ಷಣ ಇತರ ದೋಣಿಯಲ್ಲಿದ್ದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಂಬಳೆ ಠಾಣೆ ಎಸ್.ಐ ಆರ್.ಸಿ ಅನೂಪ್, ಸುರೇಂದ್ರನ್ ನೇತೃತ್ವದ ಪೊಲೀಸರ ತಂಡ ಇತರ ಮೀನು ಕಾರ್ಮಿಕರ ಸಹಾಯದೊಂದಿಗೆ ದೋಣಿಯಲ್ಲಿ ತೆರಳಿ ಅಪಾಯಕ್ಕೆ ಸಿಲುಕಿದ್ದ ದೋಣಿಯಿಂದ ಕಾರ್ಮಿಕರನ್ನು ದಡಕ್ಕೆ ತಲುಪಿಸಿದ್ದಾರೆ.

