ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಎಂಬುದು ಬಹುತೇಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಸ್ನಾನ ಮಾಡುವಾಗ ಅಥವಾ ಬಾಚುವಾಗ ಕೂದಲು ಉದುರುವುದನ್ನು ಕಂಡು ಅನೇಕರು ಆತಂಕಕ್ಕೊಳಗಾಗುತ್ತಾರೆ. ಶಾಂಪೂ ಬಳಕೆಯೇ ಕೂದಲು ಉದುರಲು ಏಕೈಕ ಕಾರಣವಲ್ಲದಿದ್ದರೂ, ನಿಮ್ಮ ಕೂದಲಿನ ಗುಣಕ್ಕೆ ಸರಿಹೊಂದದ ಶಾಂಪೂ ಬಳಸುವುದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಿಸಬಹುದು ಎಂಬುದು ತಜ್ಞರ ಅಭಿಪ್ರಾಯ.
ಸರಿಯಾದ ಸಮಯದಲ್ಲಿ ಸರಿಯಾದ ಶಾಂಪೂ ಆರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಕೂದಲು ಬುಡದಿಂದ ಉದುರುತ್ತಿದೆಯೇ ಅಥವಾ ಮಧ್ಯದಲ್ಲಿ ಕತ್ತರಿಸುತ್ತಿದೆಯೇ ಕೂದಲು ಉದುರುವುದರಲ್ಲಿ ಎರಡು ವಿಧಗಳಿವೆ. ಕೂದಲು ಬುಡದಿಂದಲೇ ಉದುರುತ್ತಿದ್ದರೆ ಅದಕ್ಕೆ ಹಾರ್ಮೋನ್ ಬದಲಾವಣೆ, ಒತ್ತಡ ಅಥವಾ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು. ಆದರೆ ಕೂದಲು ಮಧ್ಯದಲ್ಲಿ ಕತ್ತರಿಸುತ್ತಿದ್ದರೆ ಅದಕ್ಕೆ ಅತಿಯಾದ ಶಾಖ ಅಥವಾ ಕಠಿಣವಾದ ಶಾಂಪೂ ಬಳಕೆ ಕಾರಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮೃದುವಾದ ಮತ್ತು ಕೂದಲಿಗೆ ಪೋಷಣೆ ನೀಡುವ ಶಾಂಪೂ ಬಳಸುವುದು ಅತ್ಯಗತ್ಯ.
ಕೂದಲಿಗಿಂತ ಹೆಚ್ಚಾಗಿ ತಲೆಬುರುಡೆಯ ಸ್ವಭಾವ ಗಮನಿಸಿ ಶಾಂಪೂ ಆಯ್ಕೆ ಮಾಡುವಾಗ ಕೇವಲ ಕೂದಲಿನ ಬಗ್ಗೆ ಯೋಚಿಸದೆ, ನಿಮ್ಮ ತಲೆಬುರುಡೆ ಅಥವಾ ಸ್ಕಾಲ್ಪ್ ಎಣ್ಣೆಯುಕ್ತವಾಗಿದೆಯೇ ಅಥವಾ ಒಣಗಿದಂತಿದೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ನಿಮ್ಮ ತಲೆಬುರುಡೆ ಎಣ್ಣೆಯಂಶದಿಂದ ಕೂಡಿದ್ದರೆ, ಜಿಡ್ಡನ್ನು ನಿವಾರಿಸುವ ಶಾಂಪೂ ಬಳಸಿ. ಸ್ಕಾಲ್ಪ್ ಒಣಗಿದಂತಿದ್ದು ತುರಿಕೆ ಕಂಡುಬರುತ್ತಿದ್ದರೆ, ತೇವಾಂಶ ನೀಡುವ ಅಥವಾ ಮಾಯಿಶ್ಚರೈಸಿಂಗ್ ಗುಣವಿರುವ ಶಾಂಪೂ ಆರಿಸಿಕೊಳ್ಳುವುದು ಉತ್ತಮ.
ಪದೇ ಪದೇ ಶಾಂಪೂ ಮಾಡುವುದು ಬೇಡ ಅನೇಕರು ಕೂದಲು ಸ್ವಚ್ಛವಾಗಿರಲಿ ಎಂಬ ಕಾರಣಕ್ಕೆ ಪದೇ ಪದೇ ಶಾಂಪೂ ಬಳಸುತ್ತಾರೆ. ಆದರೆ ಅತಿಯಾದ ಬಳಕೆ ಕೂದಲಿನ ನೈಸರ್ಗಿಕ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಒರಟಾಗಿ ಉದುರಲು ಶುರುವಾಗುತ್ತದೆ. ಶಾಂಪೂ ಮಾಡಿದ ನಂತರ ನಿಮ್ಮ ಕೂದಲು ಮೃದುವಾಗಿರಬೇಕೇ ಹೊರತು ಒಣಗಿದಂತೆ ಇರಬಾರದು. ಒಂದು ವೇಳೆ ಶಾಂಪೂ ಬಳಸಿದ ಮೇಲೆ ಕೂದಲು ಹೆಚ್ಚು ಸಿಕ್ಕಾಗುತ್ತಿದ್ದರೆ ಆ ಶಾಂಪೂ ನಿಮ್ಮ ಕೂದಲಿಗೆ ಒಗ್ಗುತ್ತಿಲ್ಲ ಎಂದರ್ಥ.
ವಾಸನೆ ಮತ್ತು ರಾಸಾಯನಿಕಗಳ ಬಗ್ಗೆ ಎಚ್ಚರ ಅತಿಯಾದ ಸುಗಂಧವಿರುವ ಅಥವಾ ತೀವ್ರವಾದ ರಾಸಾಯನಿಕ ಹೊಂದಿರುವ ಶಾಂಪೂಗಳು ತಲೆಬುರುಡೆಯಲ್ಲಿ ಉರಿಯೂತ ಅಥವಾ ಅಲರ್ಜಿಯನ್ನು ಉಂಟುಮಾಡಬಹುದು. ಇದರಿಂದ ಕೂದಲಿನ ಬುಡ ದುರ್ಬಲಗೊಳ್ಳುತ್ತದೆ. ಹೀಗಾಗಿ ನೈಸರ್ಗಿಕ ಅಂಶಗಳಿರುವ ಅಥವಾ ವೈದ್ಯರು ಶಿಫಾರಸು ಮಾಡಿದ ಶಾಂಪೂಗಳನ್ನು ಬಳಸುವುದು ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

