ವಾಷಿಂಗ್ಟನ್: ಇರಾನ್‍ನೊಂದಿಗೆ ಸಂಭಾವ್ಯ ಪರಮಾಣು ಒಪ್ಪಂದದ ಕುರಿತು ಮಾತುಕತೆಗಳು ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಮಧ್ಯಪ್ರಾಚ್ಯಕ್ಕೆ ಮಿಲಿಟರಿ ವಿಮಾನಗಳ ನಿಯೋಜನೆಯನ್ನು ತೀವ್ರಗೊಳಿಸಿದೆ. ಪ್ರದೇಶಕ್ಕೆ ಸಿಬ್ಬಂದಿ, ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಸಾಗಿಸುವ ವಿಮಾನಗಳ `ಹರಿವು' ಹೆಚ್ಚಿರುವುದಾಗಿ ವರದಿಯಾಗಿದೆ.
ವಿಮಾನಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವ `ಫ್ಲೈಟ್ ರಾಡಾರ್' ಬಿಡುಗಡೆಗೊಳಿಸಿರುವ ವೀಡಿಯೊ ಅಮೆರಿಕದ ಸೇನಾ ನೆಲೆಯಿಂದ ಫೈಟರ್ ಜೆಟ್‍ಗಳು, ಆಗಸದಲ್ಲಿ ವಿಮಾನಗಳಿಗೆ ಇಂಧನ ಮರುತುಂಬಿಸುವ ಟ್ಯಾಂಕರ್ ವಿಮಾನಗಳು ಮತ್ತು ಸಾರಿಗೆ ವಿಮಾನಗಳು ನಿರ್ಗಮಿಸುತ್ತಿರುವುದನ್ನು ತೋರಿಸಿದೆ. ಅಟ್ಲಾಂಟಿಕ್‍ನಾದ್ಯಂತ ಯುರೋಪ್ ಮತ್ತು ಮೆಡಿಟರೇನಿಯನ್ ಮೇಲೆ ನಿರಂತರ ಹಾದು ಹೋಗುತ್ತಿರುವ ವಿಮಾನಗಳ ಸಾಲನ್ನು `ಡಿಜಟಿಲ್ ವಾಯು ಸೇತುವೆ' ಎಂದು ಬಣ್ಣಿಸಲಾಗಿದೆ.
`ಏರ್ ಆಯಂಡ್ ಸ್ಪೇಸ್ ಫೋರ್ಸಸ್' ಮ್ಯಾಗಝಿನ್ ಪ್ರಕಾರ ಹಲವು ವಿಧಗಳ ಯುದ್ದ ವಿಮಾನಗಳನ್ನು ನಿಯೋಜಿಸಲಾಗಿದೆ. ಜರ್ಮನಿಯ ಸ್ಪಾಂಗ್‍ದಹ್ಲೆಮ್ ವಾಯು ನೆಲೆ, ಇಟಲಿಯ ಆವಿಯಾನೊ ವಾಯುನೆಲೆ, ದಕ್ಷಿಣ ಕ್ಯಾಲಿಫೋರ್ನಿಯಾದ ಮೆಕಂಟೈರ್ ಜಾಯಿಂಟ್ ನ್ಯಾಷನಲ್ ಗಾರ್ಡ್ ನೆಲೆಯಿಂದ ಎಫ್-16 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಸಾಗುತ್ತಿವೆ. ಬ್ರಿಟನ್‍ನ ಆರ್‍ಎಎಫ್ ಲೇಕನ್‍ಹೆಲ್ತ್ ನೆಲೆಯಿಂದ ಎಫ್-15ಇ ಯುದ್ದವಿಮಾನ, ವರ್ಜೀನಿಯಾ ವಾಯುನೆಲೆಯಿಂದ ಎಫ್-22 ಯುದ್ದವಿಮಾನಗಳು ಮಧ್ಯಪ್ರಾಚ್ಯದತ್ತ ಧಾವಿಸುತ್ತಿವೆ. ಇದರ ಜೊತೆಗೆ ಆರ್‍ಸಿ-135 ರಿವೆಟ್ ಜಂಟಿ ಕಣ್ಗಾವಲು ವಿಮಾನ ಮತ್ತು ಪಿ-8 ಪೊಸಿಡಾನ್ ಕಡಲ ಬೇಹುಗಾರಿಕಾ ವಿಮಾನಗಳನ್ನೂ ಅಮೆರಿಕ ಸ್ಥಳಾಂತರಿಸುತ್ತಿದೆ ಎಂದು ವರದಿ ಹೇಳಿದೆ.

