ನವದೆಹಲಿ: ಇರಾನ್‌ನಲ್ಲಿ ಪರಿಸ್ಥಿತಿ ವಿಷಮಗೊಂಡಿರುವ ಬೆನ್ನಲ್ಲೇ, ವಾಣಿಜ್ಯ ವಿಮಾನ ಸೇರಿದಂತೆ ಲಭ್ಯವಿರುವ ಎಲ್ಲ ಸಾರಿಗೆ ಸೌಲಭ್ಯಗಳನ್ನು ಬಳಸಿಕೊಂಡು ದೇಶ ಬಿಟ್ಟು ಮರಳುವಂತೆ ಭಾರತವು ತನ್ನ ನಾಗರಿಕರಿಗೆ ಸೂಚನೆ ನೀಡಿದೆ.
ಟೆಹರಾನ್‌ನಲ್ಲಿ ಮತ್ತೆ ಪ್ರತಿಭಟನೆಗಳು ಆರಂಭಗೊಂಡಿದ್ದು, ಅಮೆರಿಕವು ಸೇನಾ ಕಾರ್ಯಾಚರಣೆ ನಡೆಸುವ ಆತಂಕ ಎದುರಾಗಿದೆ.
ಇದರ ಬೆನ್ನಲ್ಲೇ, ಭಾರತದ ನಾಗರಿಕರಿಗೆ ಇರಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ಸಲಹೆ ನೀಡಿದೆ.
ಕಳೆದ ತಿಂಗಳು ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ, ಹೋರಾಟ ತಣ್ಣಗಾಗಿತ್ತು. ಇದೀಗ ಹೊಸತಾಗಿ ಪ್ರತಿಭಟನೆಗಳು ಆರಂಭಗೊಂಡ ಬೆನ್ನಲ್ಲೇ, ರಾಯಭಾರ ಕಚೇರಿಯು ಈ ಸಲಹೆಯನ್ನು ಹೊರಡಿಸಿದೆ.
ಅಂದಾಜಿನ ಪ್ರಕಾರ, ವಿದ್ಯಾರ್ಥಿಗಳು ಸೇರಿದಂತೆ 10 ಸಾವಿರ ಭಾರತೀಯರು ಇರಾನ್‌ನಲ್ಲಿ ನೆಲಸಿದ್ದಾರೆ.
'ಇರಾನ್‌ನಲ್ಲಿ ಪರಿಸ್ಥಿತಿ ಪ್ರಕ್ಷುಬ್ದಗೊಳ್ಳುತ್ತಿರುವ ಬೆನ್ನಲ್ಲೇ, ಜನವರಿ 5ರಂದು ಹೊರಡಿಸಿದ್ದ ಸಲಹೆ ಮುಂದುವರಿಕೆಯಾಗಿ ಇರಾನ್‌ನಲ್ಲಿ ನೆಲಸಿರುವ ಎಲ್ಲ ಭಾರತೀಯರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲರೂ ಭಾರತಕ್ಕೆ ಮರಳುವಂತೆ ಸೂಚನೆ ನೀಡಲಾಗಿದೆ' ಎಂದು ರಾಯಭಾರ ಕಚೇರಿಯು ತಿಳಿಸಿದೆ.
'ಎಲ್ಲ ಭಾರತೀಯರು ಹಾಗೂ ಭಾರತದ ಮೂಲದವರು ಪ್ರತಿಭಟನೆ ನಡೆಯುವ ಸ್ಥಳಗಳಿಗೆ ತೆರಳಬಾರದು, ಯಾವುದೇ ಸಮಸ್ಯೆ ಉಂಟಾದರೂ ಕೂಡ ರಾಯಭಾರ ಕಚೇರಿ ಸಂಪರ್ಕಿಸಬೇಕು' ಎಂದು ಕೋರಲಾಗಿದೆ.
'ಪ್ರಯಾಣ ಹಾಗೂ ವಲಸೆ ದಾಖಲಾತಿಗಳು, ಪಾಸ್‌ಪೋರ್ಟ್, ಗುರುತಿನ ಚೀಟಿಯನ್ನು ಸುಲಭವಾಗಿ ಸಿಗುವಂತೆ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ಯಾವುದೇ ರೀತಿಯ ನೆರವು ಬೇಕಿದ್ದರೂ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು' ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ತುರ್ತು ಸಹಾಯವಾಣಿ ಸಂಖ್ಯೆ:
+989128109115; +989128109109;
+989128109102; +989932179359.
ಇಮೇಲ್: cons.tehranomsa.gov.in
ಇರಾನ್‌ನಲ್ಲಿರುವ ಭಾರತೀಯರಿಗೆ ಈ ಲಿಂಕ್‌ನಲ್ಲಿ (https://www.meaers.com/request/home) ತಮ್ಮ ಹೆಸರನ್ನು ನೋಂದಾಯಿಸಲು ಸೂಚಿಸಲಾಗಿದೆ. ಇಂಟರ್‌ನೆಟ್ ಅಡಚಣೆಯಿಂದಾಗಿ ಹೆಸರು ನೋಂದಾಯಿಸಲು ಸಾಧ್ಯವಾಗದಿದ್ದರೆ ಅವರ ಪರವಾಗಿ ಭಾರತದಲ್ಲಿರುವ ಅವರ ಕುಟುಂಬದ ಸದಸ್ಯರು ಹೆಸರು ನೋಂದಾಯಿಸುವಂತೆಯೂ ವಿನಂತಿಸಲಾಗಿದೆ.

