ಕಾಸರಗೋಡು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಮತಗಳ್ಳತನದ ಆರೋಪವನ್ನು ಬಿಜೆಪಿ ಮೇಲೆ ಹೊರಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿಯಿಂದ ನಕಲಿ ಹೆಸರುಗಳನ್ನು ರದ್ದುಪಡಿಸಲು ಅರ್ಜಿ ಸಲ್ಲಿಸಿದ ಬಿಜೆಪಿ ನಾಯಕನ ಹೆಸರನ್ನು ಪ್ರಸ್ತಾಪಿಸುವ ಮೂಲಕ ಬೆದರಿಕೆ ತಂತ್ರ ಹೂಡಲು ಮಂಜೇಶ್ವರ ಶಾಸಕರು ಪ್ರಯತ್ನಿಸುತ್ತಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ, ಅನರ್ಹ ಹೆಸರುಗಳನ್ನು ತೆಗೆದುಹಾಕಲು ಅರ್ಜಿ ಸಲ್ಲಿಸುವುದು ಕೂಡ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಿದೆ. ಮತದಾರರ ಪಟ್ಟಿಯಿಂದ ನಕಲಿ ಮತದಾರರನ್ನು ತೆಗೆದುಹಾಕಲು ಸಲ್ಲಿಸಲಾದ ಅರ್ಜಿಗಳ ಕುರಿತು ಕಾಸರಗೋಡು ಜಿಲ್ಲಾಧಿಕಾರಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ನಕಲಿ ಮತದಾರರು ಮತ್ತು ಎರಡು ಕಡೆ ಮತ ಹೊಂದಿರುವವರನ್ನು ಬಳಸಿಕೊಂಡೇ ಮುಸ್ಲಿಂ ಲೀಗ್ ಇದುವರೆಗಿನ ಚುನಾವಣೆಗಳಲ್ಲಿ ಮುನ್ನಡೆ ಸಾಧಿಸುತ್ತಾ ಬಂದಿದೆ. ಇದಕ್ಕಾಗಿ ಲೀಗ್ ಆಡಳಿತವಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಕಲಿ ವಾಸ್ತವ್ಯ ದೃಢೀಕರಣ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಎಂ.ಎಲ್. ಅಶ್ವಿನಿ ಹೇಳಿದರು.

