ತಿರುವನಂತಪುರಂ: ಕೇರಳದ ಕಣ್ಣೂರಿನ 24 ವರ್ಷದ ತಾನ್ಯಾ ನಾಥನ್ ಸಿ. ಅವರು ಸಿವಿಲ್ ನ್ಯಾಯಾಧೀಶ (ಜೂನಿಯರ್ ಡಿವಿಷನ್) ಹುದ್ದೆಗಾಗಿ ನಡೆದ ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದ ಮೊದಲ ಅಂಧ ನ್ಯಾಯಾಂಗ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.
ತಾನ್ಯಾ ಅವರು ಒಂದು ವರ್ಷದಿಂದ ವಕೀಲಿಕೆ ಅಭ್ಯಾಸ ಮಾಡುತ್ತಿದ್ದಾರೆ. ಸ್ಕ್ರೀನ್ ರೀಡರ್ ಮತ್ತು ಡಿಕ್ಟೇಷನ್ ಆಯಪ್‌ಗಳನ್ನು ಬಳಸಿಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ತಾನ್ಯಾ ಅವರು ಕಣ್ಣೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಹುಟ್ಟಿನಿಂದಲೇ ಅಂಧರಾಗಿರುವ ಅವರು, ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗಲೇ ಕಾನೂನು ಕ್ಷೇತ್ರದಲ್ಲಿ ಮುಂದುವರಿಯುವ ಕನಸು ಕಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಾನ್ಯಾ ಅವರು, 'ಕಾನೂನು ಸೇವೆಯು ವಿಭಿನ್ನ ವೃತ್ತಿ ಎಂದು ಪರಿಗಣಿಸುತ್ತೇನೆ. ಅಲ್ಲದೆ, ಪ್ರತಿಯೊಬ್ಬರ ಪಾಲಿಗೂ ಕಾನೂನು ಬಲಿಷ್ಠವಾದ ಅಸ್ತ್ರ. ಇದು ಈ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೇರೇಪಿಸಿತು' ಎಂದರು.
'ಇ-ನ್ಯಾಯಾಲಯಗಳ ಅನುಷ್ಠಾನದೊಂದಿಗೆ ಕೋರ್ಟ್‌ಗಳ ಆಧುನೀಕರಣವು ಅಂಗವಿಕಲರಿಗೆ ನ್ಯಾಯಾಲಯಗಳಲ್ಲಿ ವೃತ್ತಿ ಮಾಡಲು ಅನುಮಾಡಿಕೊಡುತ್ತದೆ' ಎಂದು ಹೇಳಿದರು.
'ಕಿರಿಯ ವಕೀಲೆಯಾಗಿದ್ದರೂ ಸಾಕಷ್ಟು ಬೆಂಬಲ ದೊರೆತಿದೆ. ಅಂಧತೆಯ ಮಿತಿಯಿಂದ ಹೊರಬಂದು ನ್ಯಾಯದಾನ ಮಾಡುವ ವಿಶ್ವಾಸವಿದೆ' ಎಂದು ಹೇಳಿದರು.

