ನ್ಯೂಯಾರ್ಕ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್ ನನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ನಿಖಿಲ್ ಗುಪ್ತಾ ಅಮೆರಿಕದ ಫೆಡರಲ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಮ್ಯಾನ್‌ಹ್ಯಾಟನ್ ನ ನ್ಯಾಯಾಲಯದಲ್ಲಿ ಶುಕ್ರವಾರ ಹಾಜರಾದ 54 ವರ್ಷದ ಗುಪ್ತಾ, ಬಾಡಿಗೆ ಹಂತಕನ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ ಆರೋಪ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ ಎಂದು ಅಮೆರಿಕ ವಕೀಲರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ಪ್ರಕರಣದಲ್ಲಿ 2024ರ ಜೂನ್‌ನಲ್ಲಿ ನಿಖಿಲ್ ಗುಪ್ತಾ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದನು.
ಹತ್ಯೆ ಯತ್ನ ವಿಫಲವಾದ ಬಳಿಕ 2023ರ ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿತನಾದ ನಿಖಿಲ್ ಗುಪ್ತಾ ನಂತರ ಅಮೆರಿಕಕ್ಕೆ ಹಸ್ತಾಂತರಗೊಂಡಿದ್ದನು. ಅಮೆರಿಕದ ಪ್ರಾಸಿಕ್ಯೂಟರ್‌ಗಳ ಪ್ರಕಾರ, ಪನ್ನೂನ್ ಹತ್ಯೆ ಸಂಚಿನಲ್ಲಿ ಗುಪ್ತಾ ಒಬ್ಬ ಭಾರತೀಯ ಸರ್ಕಾರಿ ಅಧಿಕಾರಿಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಆದರೆ, ಭಾರತ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದ್ದು, ಇಂತಹ ಕ್ರಮಗಳು ಸರ್ಕಾರದ ನೀತಿಗೆ ವಿರುದ್ಧವೆಂದು ಸ್ಪಷ್ಟಪಡಿಸಿದೆ. ಭಾರತದಿಂದ ಭಯೋತ್ಪಾದಕನಾಗಿ ಗುರುತಿಸಲ್ಪಟ್ಟಿರುವ ಪನ್ನೂನ್ ಅಮೆರಿಕ ನಿವಾಸಿಯಾಗಿದ್ದು, ಅಮೆರಿಕ-ಕೆನಡಾದಲ್ಲಿ ದ್ವಿಪೌರತ್ವ ಹೊಂದಿದ್ದಾನೆ. ಈ ಪ್ರಕರಣ ಭಾರತ-ಅಮೆರಿಕ ಹಾಗೂ ಭಾರತ-ಕೆನಡಾ ಸಂಬಂಧಗಳ ವಿಚಾರದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಪ್ರಕರಣದಲ್ಲಿ ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯ ಅಧಿಕಾರಿ ವಿಕಾಶ್ ಯಾದವ್ ಅವರ ಹೆಸರೂ ಉಲ್ಲೇಖವಾಗಿದ್ದು, ಅವರು ಭಾರತದಲ್ಲಿಯೇ ಇರುವುದಾಗಿ ವರದಿಯಾಗಿದೆ. ಅಮೆರಿಕಕ್ಕೆ ಹಸ್ತಾಂತರವಾದ ನಂತರದಿಂದ ನಿಖಿಲ್ ಗುಪ್ತಾ ಬಂಧನದಲ್ಲಿಯೇ ಇದ್ದು, ದೀರ್ಘಾವಧಿ ಜೈಲು ಶಿಕ್ಷೆಯ ಸಾಧ್ಯತೆಯನ್ನು ಎದುರಿಸುತ್ತಿದ್ದಾನೆ.

