ಕಾಸರಗೋಡು: ಕಾರ್ಮಿಕರ ಮೂಲಭೂತ ಹಕ್ಕು ನಿರಾಕರಿಸುವ ರೀತಿಯ ಕಾರ್ಮಿಕ ನೀತಿ ಜಾರಿಗೆ ತರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಗುರುವಾರ ನಡೆದ ರಾಷ್ಟ್ರವ್ಯಾಪಿ ಮುಷ್ಕರ ಕಾಸರಗೋಡಿನಲ್ಲಿ ಯಶಸ್ವಿಯಾಗಿತ್ತು. ಅಂಗಡಿಮುಂಗಟ್ಟುಗಳು ಮುಚ್ಚಿಕೊಂಡಿದ್ದರೆ, ಕೆಎಸ್ಸಾರ್ಟಿಸಿ, ಖಾಸಗಿ ಬಸ್‍ಗಳೂ ಸಂಚಾರ ಸ್ಥಗಿತಗೊಳಿಸಿತ್ತು. ಕೆಲವೊಂದು ಖಾಗಿ ವಾಹನಗಳು ಸಂಚಾರ ನಡೆಸುತ್ತಿತ್ತು. ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲೂ ಹಾಜರಾತಿ ಕಡಿಮೆಯಿತ್ತು.
ಸಿಐಟಿಯು, ಎಐಟಿಯುಸಿ, ಚ್‍ಎಂಎಸ್, ಎನ್‍ಎಲ್‍ಯು, ಐಎನ್‍ಎಲ್‍ಸಿ, ಜೆಜೆಯುಸಿ, ಮತ್ತು ಕೆಟಿಯುಸಿಯಂತಹ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಹರತಾಳಕ್ಕೆ ಕರೆನೀಡಿತ್ತು.
ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿರುವ ಲೇಬರ್ ಕೋಡ್ ಹಿಂಪಡೆಯುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಪುನಃಸ್ಥಾಪಿಸುವುದು ಸೇರಿದಂತೆ 13ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ರಾಷ್ಟ್ರೀಯ ಮುಷ್ಕರ ನಡೆಸಲಾಗಿತ್ತು. ಜಿಲ್ಲೆಯ ನುರಕ್ಕೂ ಹೆಚ್ಚು ಕೇಂದ್ರಗಳಲ್ಲಿ ರೈತರು, ಕೃಷಿ ಕಾರ್ಮಿಕರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಮುಂತಾದ ಜನಪರ ಸಂಘಟನೆಗಳ ವತಿಯಿಂದ ಪ್ರತಿಭಟನಾ ಮೆರವಣಿಗೆ, ಸಾರ್ವಜನಿಕ ಸಭೆ ನಡೆಯಿತು.
ಶಾಸಕ ಎಂ. ರಾಜಗೋಪಾಲನ್, ಸಿಐಟಿಯುರಾಜ್ಯ ಸಮಿತಿ ಕಾರ್ಯದರ್ಶಿ ಟಿ.ಕೆ ರಾಜನ್, ಟಿ. ಕೃಷ್ಣನ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮಣಿಮೋಹನ್, ಎಐಟಿಯು ಜಿಲ್ಲಾ ಕಾರ್ಯದರ್ಶಿ ಬಿಜು ಉಣ್ಣಿತ್ತಾನ್, ಎಚ್‍ಎಂಎಸ್ ರಾಜ್ಯ ಉಪಾಧ್ಯಕ್ಷ ಪಿ.ವಿ. ತಂಬಾನ್, ಎನ್‍ಎಲ್‍ಯು ಜಿಲ್ಲಾಧ್ಯಕ್ಷ ಅಬ್ದುರಹ್ಮಾನ್ ಮಾಸ್ಟರ್ ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.

