ಕಾಸರಗೋಡು: ಪೆರಿಯ ಸನಿಹದ ಆಯಂಬಾರ ಉರುಳಂಕೋಡಿಯಲ್ಲಿ ಚಿರತೆ ಮರಿಗಳನ್ನು ಹೋಲುವ ಪ್ರಾಣಿಗಳು ಕಂಡುಬಂದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಉರುಳಂಕೋಡಿಯ ಅಡಕೆ ತೋಟದಲ್ಲಿ ಈ ಪ್ರಾಣಿಗಳು ಕಂಡುಬಂದಿದ್ದು, ತೋಟದ ಮಾಲಿಕ ಇವುಗಳನ್ನು ಮೊಬೈಲಲ್ಲಿ ಚಿತ್ರೀಕರಿಸಿ ಅರಣ್ಯ ಇಲಾಖೆಗೆ ನೀಡಿದ್ದು, ಇವುಗಳು ಕಾಡುಬೆಕ್ಕುಗಳೆಂದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ತೋಟದಲ್ಲಿ ಹೆಜ್ಜೆಗುರುತು ಪತ್ತೆಯಾಗಿದ್ದು, ಇದು ಚಿರತೆಯ ಪಂಜದ ಗುರುತಾಗಿರುವುದಾಗಿ ಸಂಶಯ ವ್ಯಕ್ತಪಡಿಸಲಾಗಿದೆ. ಪೆರಿಯ ಆಸುಪಾಸು ಇತ್ತೀಚಿನ ದಿನಗಳಲ್ಲಿ ಚಿರತೆ ಕಾಣಿಸಿಕೊಂಡಿರುವುದರ ಜತೆಗೆ ಚಿರತೆಮರಿಗಳನ್ನು ಹೋಲುವ ಪ್ರಾಣಿಗಳು ಪತ್ತೆಯಾಗಿರುವುದು ನಾಗರಿಕರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ.


