ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಪಾಂಚೋಲಿ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ. ಅರ್ಜಿಗಳನ್ನು ಪರಿಗಣಿಸಿದ ಪೀಠ, ವಿಚಾರಣೆಯ ವೇಳಾಪಟ್ಟಿಯನ್ನು ನಿಗದಿಪಡಿಸಿತು. ಈ ಅರ್ಜಿ 2024ರ ಮಾರ್ಚ್ 19ರಂದು ಈ ಹಿಂದೆ ವಿಚಾರಣೆಗೆ ಪಟ್ಟಿ ಆಗಿತ್ತು.
ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು, ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಪ್ರತ್ಯೇಕವಾಗಿ ಆಲಿಸಬೇಕೆಂದು ಮನವಿ ಮಾಡಿದರು. ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಹಾಗೂ ಇಂಟರ್ಲೈನ್ ಪರ್ಮಿಟ್ ವ್ಯವಸ್ಥೆಯಿಂದ ಉದ್ಭವಿಸುವ ಪ್ರಶ್ನೆಗಳು ವಿಭಿನ್ನವಾಗಿರುವುದರಿಂದ ಪ್ರತ್ಯೇಕ ವಿಚಾರಣೆ ಅಗತ್ಯ ಎಂದು ಅವರು ಹೇಳದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2020ರ ಜನವರಿಯ ಆದೇಶದಂತೆ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ವಿಷಯಗಳನ್ನು ಇತರ ಅರ್ಜಿಗಳಿಂದ ಬೇರ್ಪಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ದೇಶದ ಉಳಿದ ಭಾಗಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಮೊದಲು ಆಲಿಸಿ, ಬಳಿಕ ಅಸ್ಸಾಂ ಮತ್ತು ತ್ರಿಪುರಾ ಸಂಬಂಧಿತ ಅರ್ಜಿಗಳನ್ನು ಪರಿಗಣಿಸಬಹುದು ಎಂದು ಸಿಜೆಐ ಸೂಚಿಸಿದರು.
ನ್ಯಾಯಾಲಯದ ಸೂಚನೆಯಂತೆ ಮೇ 5 ಮತ್ತು 6ರಂದು ಅರ್ಜಿಯ ಅರ್ಧ ದಿನದ ವಿಚಾರಣೆ ನಡೆಯಲಿದೆ. ಮೇ 6ರ ದ್ವಿತೀಯಾರ್ಧ ಹಾಗೂ ಮೇ 7ರಂದು ಪ್ರತಿವಾದಿಗಳ ವಾದಗಳು ಕೇಳಲಾಗುತ್ತದೆ. ಮೇ 12ರಂದು ಪ್ರತಿವಾದಗಳ ವಿಚಾರಣೆ ಮುಂದುವರಿಯಲಿದೆ.
CAA-2019 ಪ್ರಕಾರ, 2014ರ ಡಿಸೆಂಬರ್ 31ರೊಳಗೆ ಮಾನ್ಯ ದಾಖಲೆಗಳಿಲ್ಲದೆ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ಪಡೆಯಲು ಅವಕಾಶ ನೀಡಲಾಗಿದೆ. ಇಂತಹವರನ್ನು 'ಅಕ್ರಮ ವಲಸಿಗರು' ಎಂದು ಪರಿಗಣಿಸದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಮತ್ತು ಇತರ ನೆರೆಯ ರಾಷ್ಟ್ರಗಳಿಂದ ಸಂಘರ್ಷಕ್ಕೊಳಗಾಗಿ ಬಂದ ನಿರಾಶ್ರಿತರನ್ನು ಪರಿಗಣಿಸದಿರುವುದು ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವೆಂದು ಅರ್ಜಿದಾರರು ವಾದಿಸಿದ್ದಾರೆ. 2024ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರವು ಕಾಯ್ದೆ ಜಾರಿಗೆ ನಿಯಮಗಳನ್ನು ಅಧಿಸೂಚನೆ ಮಾಡಿ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿತ್ತು. CAA ನಿಯಮಗಳು-2024ನ್ನೂ ಪ್ರಶ್ನಿಸಲಾಗಿದ್ದರೂ, ಅವುಗಳ ವಿಚಾರಣೆ ಇನ್ನೂ ನಡೆಯಬೇಕಿದೆ.
ಅಸ್ಸಾಂನ ಅರ್ಜಿದಾರರು CAA ಅಸ್ಸಾಂ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿದ್ದಾರೆ. ಜೊತೆಗೆ, ಕೇರಳ ರಾಜ್ಯವು ಶಾಸನವನ್ನು ಪ್ರಶ್ನಿಸಿ ಮೊಕದ್ದಮೆ ಹೂಡಿದೆ. ಕೇಂದ್ರ ಸರ್ಕಾರವು, ಈ ಕಾಯ್ದೆಯಿಂದ ಯಾವುದೇ ಭಾರತೀಯ ನಾಗರಿಕನ ಪೌರತ್ವಕ್ಕೆ ಧಕ್ಕೆಯಾಗುವುದಿಲ್ಲ; ನಿರ್ದಿಷ್ಟ ವರ್ಗಗಳಿಗೆ ರಿಯಾಯಿತಿ ನೀಡಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.

