ಇದು ಎಪ್‌ಸ್ಟೀನ್ ನ ಜಾಗತಿಕ ಸಂಪರ್ಕ ಜಾಲವು ಅಮೆರಿಕದ ಹೊರಗಡೆಯೂ, ಭಾರತದವರೆಗೂ ವಿಸ್ತರಿಸಿತ್ತು ಎನ್ನುವುದನ್ನು ಎತ್ತಿ ತೋರಿಸುತ್ತದೆ.
ದಾಖಲೆಗಳ ಪ್ರಕಾರ, 2017ರಿಂದ 2019ರವರೆಗೆ ಎಪ್‌ಸ್ಟೀನ್ ಮತ್ತು ಅಂಬಾನಿ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು. 2019ರಲ್ಲಿ ಅಪ್ರಾಪ್ತ ವಯಸ್ಕರ ಕಳ್ಳಸಾಗಣೆ ಆರೋಪದಲ್ಲಿ ಎಪ್‌ಸ್ಟೀನ್ ನನ್ನು ಬಂಧಿಸಲಾಗಿತ್ತು. ಬಳಿಕ ಆತ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ. ಉಭಯತರ ನಡುವಿನ ಸಂಭಾಷಣೆಗಳಲ್ಲಿ ಜಾಗತಿಕ ವ್ಯವಹಾರಗಳು, ಉದ್ಯಮ ಆಸಕ್ತಿಗಳು, ವೈಯಕ್ತಿಕ ಮತ್ತು ಮಹಿಳೆಯರ ವಿಷಯಗಳು ಸೇರಿದ್ದವು. ಖಾಸಗಿಯಾಗಿ ಪರಸ್ಪರ ಭೇಟಿಯಾಗುವ ಬಗ್ಗೆಯೂ ಅವರು ಚರ್ಚಿಸಿದ್ದರು.
2017ರಲ್ಲಿ ಎಪ್‌ಸ್ಟೀನ್ ಅಂಬಾನಿ ಕುಟುಂಬದ ಮಾಹಿತಿಗಳಿದ್ದ ಹಲವಾರು ಪುಸ್ತಕಗಳನ್ನೂ ತರಿಸಿಕೊಂಡಿದ್ದ ಎಂದು ದಾಖಲೆಗಳು ತೋರಿಸಿವೆ.
2017, ಮಾ.9ರಂದು ಸಂದೇಶವೊಂದರಲ್ಲಿ ಅಂಬಾನಿ 'ನೀವು ಯಾರನ್ನು ಸೂಚಿಸುತ್ತೀರಿ' ಎಂದು ಎಪ್‌ಸ್ಟೀನ್ ನನ್ನು ಪ್ರಶ್ನಿಸಿದ್ದು, ಅದಕ್ಕೆ ಆತ 'ಎತ್ತರದ ನಿಲುವಿನ ಹೊಂಬಣ್ಣದ ಸ್ವೀಡಿಷ್ ಮಹಿಳೆ ಇದ್ದರೆ ಭೇಟಿಯು ಹೆಚ್ಚು ಖುಷಿಯನ್ನು ನೀಡುತ್ತದೆ' ಎಂದು ಉತ್ತರಿಸಿದ್ದ. ಹಾಗಾದರೆ ಅದನ್ನು ವ್ಯವಸ್ಥೆ ಮಾಡುವಂತೆ ಅಂಬಾನಿ ಸೂಚಿಸಿದ್ದರು.
ಅದೇ ವರ್ಷ ಪ್ಯಾರಿಸ್‌ನಲ್ಲಿ ಭೇಟಿಯಾಗುವ ಬಗ್ಗೆ ಇಬ್ಬರೂ ಚರ್ಚಿಸಿದ್ದನ್ನು ಸಂದೇಶಗಳು ತೋರಿಸಿವೆ.
ಮೇ 2019ರಲ್ಲಿ ತಾನು ನ್ಯೂಯಾರ್ಕ್ ಗೆ ಬರುತ್ತಿರುವುದಾಗಿ ಅಂಬಾನಿ ಸಂದೇಶದಲ್ಲಿ ತಿಳಿಸಿದಾಗ, ತನ್ನನ್ನು ಭೇಟಿಯಾಗುವಂತೆ ಎಪ್‌ಸ್ಟೀನ್ ಅವರನ್ನು ಆಹ್ವಾನಿಸಿದ್ದ. ಮ್ಯಾನಹಟನ್ ನ ಅಪ್ಪರ್ ಈಸ್ಟ್ ಸೈಡ್‌ನಲ್ಲಿಯ ಎಪ್‌ಸ್ಟೀನ್ ನಿವಾಸದಲ್ಲಿ ಅವರಿಬ್ಬರೂ ಭೇಟಿಯಾಗಿದ್ದರು ಎನ್ನುವುದನ್ನು ಸಹಾಯಕರು ದೃಢಪಡಿಸಿದ್ದಾರೆ.
ಅಂಬಾನಿಯ ಪ್ರತಿನಿಧಿಯೋರ್ವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಅಂಬಾನಿಯೊಂದಿನ 2017ರ ಸಂಭಾಷಣೆಯೊಂದರಲ್ಲಿ 'ಎಂತಹ ಮಹಿಳೆಯರು ನಿಮಗಿಷ್ಟ?' ಎಂದು ಎಪ್‌ಸ್ಟೀನ್ ಪ್ರಶ್ನಿಸಿದ್ದ. ಈ ವೇಳೆ ಅಂಬಾನಿ ತನ್ನ ಹಾಲಿವುಡ್ ಸಂಪರ್ಕಗಳನ್ನು ಪ್ರಸ್ತಾವಿಸಿದಂತಿದೆ.
'ನೀವು ಒಲವು ಹೊಂದಿರುವ ನಟಿ ಅಥವಾ ರೂಪದರ್ಶಿ ಇದ್ದಾರೆಯೇ?' ಎಂದು ಕೇಳಿದ್ದ ಎಪ್‌ಸ್ಟೀನ್, 'ಅದು ಮೆರಿಲ್ ಸ್ಟ್ರೀಪ್ ಅಲ್ಲ ಎಂದು ನಾನು ಆಶಿಸಿದ್ದೇನೆ. ಅದರಿಂದ ನನಗೇನೂ ಸಹಾಯವಿಲ್ಲ' ಎಂದು ಬರೆದಿದ್ದ.
'ರುಚಿ ಇನ್ನಷ್ಟು ಚೆನ್ನಾಗಿರಲಿ, ಗೆಳೆಯ. ನಮ್ಮ ಮುಂದಿನ ಚಿತ್ರದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ನಟಿಸಲಿದ್ದಾಳೆ' ಎಂದು ಅಂಬಾನಿ ಪ್ರತಿಕ್ರಿಯಿಸಿದ್ದರು.
ಅದೇ ವರ್ಷ ಜೋಹಾನ್ಸನ್ ನಟಿಸಿದ್ದ 'ಘೋಸ್ಟ್ ಇನ್ ದಿ ಶೆಲ್' ಚಿತ್ರವನ್ನು ರಿಲಯನ್ಸ್ ಎಂಟರ್‌ಟೇನ್‌ಮೆಂಟ್ ನಿರ್ಮಿಸಿತ್ತು.
'ನೀವು ವಯಸ್ಸಾದವರಿಗಿಂತ ಯುವ ಸುಂದರಿಯರನ್ನು ಇಷ್ಟಪಡುತ್ತೀರಿ ಎನ್ನುವುದು ನನಗೆ ಖುಷಿಯುಂಟು ಮಾಡಿದೆ' ಎಂದೂ ಎಪ್‌ಸ್ಟೀನ್ ಆ ಸಂಭಾಷಣೆಯಲ್ಲಿ ಬರೆದಿದ್ದ.
ಮೇ 2019ರಲ್ಲಿ ಅಂಬಾನಿ ಜೊತೆ ಭೇಟಿಯ ಬಳಿಕ ಎಪ್‌ಸ್ಟೀನ್ ಸಂದೇಶವೊಂದನ್ನು ಕಳುಹಿಸಿದ್ದು, 'ಇಂದು ಸಮಯ ತುಂಬ ಚೆನ್ನಾಗಿ ಕಳೆಯಿತು, ನಿಮ್ಮನ್ನು ಭೇಟಿಯಾಗಿದ್ದು ಸಂತಸವನ್ನುಂಟು ಮಾಡಿದೆ' ಎಂದು ಬರೆದಿದ್ದ.

