ಇಸ್ರೇಲ್ ರಾಷ್ಟ್ರದ ಸ್ಥಾಪನೆ ಕುರಿತ ತನ್ನ ನಿಲುವಿನ ಬಗ್ಗೆ ಭಾರತದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಭೌತವಿಜ್ಞಾನಿ ಅಲ್ಬರ್ಟ್ ಐನ್ಸ್ಟೀನ್ ಅವರಿಗೆ ಬರೆದ ಪತ್ರದ ವಿವರಗಳನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ಬುಧವಾರ ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಗಾಝಾ ಶಾಂತಿ ಉಪಕ್ರಮವು ಈ ಪ್ರದೇಶದಲ್ಲಿ ದೀರ್ಘಕಾಲದ ಶಾಂತಿಯೆಡೆಗೆ ಸಾಗುವ ದಾರಿಯಾಗಿದೆಯೆಂದು ಹೇಳಿದ್ದಾರೆ. ಇಸ್ರೇಲ್ ಜೊತೆಗೆ ಏಕತೆಯನ್ನು ಘೋಷಿಸಿದ ಪ್ರಧಾನಿಯವರು, ಭಾರತದ ದೃಢ ನಿಲುವನ್ನು ಪ್ರತಿಪಾದಿಸಿದರು.
ಇಸ್ರೇಲ್ ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಅವರು, ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಕುರಿತ ಪ್ರಶ್ನೆಗೆ ನೆಹರೂ ನೀಡಿದ್ದ ಉತ್ತರವನ್ನು ಉಲ್ಲೇಖಿಸಿದರು. ಐನ್ಸ್ಟೀನ್ ಅವರನ್ನು 1949ರ ನವೆಂಬರ್ 5ರಂದು ಪ್ರಿನ್ಸ್ಟನ್ ನಲ್ಲಿರುವ ಅವರ ನಿವಾಸದಲ್ಲಿ ಜವಾಹರಲಾಲ್ ನೆಹರೂ ಭೇಟಿಯಾಗಿದ್ದರು. 1952ರಲ್ಲಿ ಇಸ್ರೇಲ್ ನ ಅಧ್ಯಕ್ಷರಾಗುವಂತೆ ನೀಡಿದ ಕೊಡುಗೆಯನ್ನು ಐನ್ಸ್ಟೀನ್ ನಿರಾಕರಿಸಿದ್ದನ್ನು ಜೈರಾಮ್ ರಮೇಶ್ ಸ್ಮರಿಸಿದರು.
1947ರ ಜುಲೈ 11ರಂದು ನೆಹರೂ ಅವರು ಐನ್ಸ್ಟೀನ್ ಅವರಿಗೆ ಬರೆದ ಪತ್ರದಲ್ಲಿ, ಯಹೂದ್ಯರ ಬಗ್ಗೆ ಅಪಾರ ಅನುಕಂಪವಿದೆ. ಇದೇ ವೇಳೆ ಅರಬ್ಬರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಸಹಾನುಭೂತಿ ಇದೆ. ಯಾವುದೇ ಸಂದರ್ಭದಲ್ಲೂ ಈ ವಿವಾದವು ಉಭಯಪಕ್ಷಗಳಿಗೂ ಅತ್ಯಂತ ಭಾವುಕ ಹಾಗೂ ಗಾಢ ಯಾತನೆಯ ವಿಷಯವಾಗಿದೆ ಎಂದು ತಿಳಿಸಿದ್ದರೆಂದು ರಮೇಶ್ ಹೇಳಿದರು.
ನಿಷ್ಪಕ್ಷಪಾತ ಹಾಗೂ ಸಂಬಂಧಿತ ಪಕ್ಷಗಳು ಸಾಮಾನ್ಯವಾಗಿ ಒಪ್ಪಿಕೊಳ್ಳುವ ವ್ಯಕ್ತಿಗಳು ಸಂಧಾನದಲ್ಲಿ ಪಾಲ್ಗೊಳ್ಳದೆ ಇದ್ದರೆ, ಹಾಲಿ ಪರಿಸ್ಥಿತಿಯಲ್ಲಿ ಯಾವುದೇ ಪರಿಣಾಮಕಾರಿ ಪರಿಹಾರ ಸಾಧ್ಯವಿಲ್ಲ ಎಂದು ಅವರು ಹೇಳಿದರು.

