ನವದೆಹಲಿ: 2025-26ನೇ ವರ್ಷದ ನೀಟ್-ಪಿಜಿಯ ಅರ್ಹತೆಗೆ ಸಂಬಂಧಿಸಿದ ಕಟ್‌ಆಫ್ ಪರ್ಸಂಟೈಲ್‌ಗಳನ್ನು ಗಣನೀಯವಾಗಿ ಕಡಿತಗೊಳಿಸುವ ನಿರ್ಧಾರದ ಕುರಿತು ವಿವರಣೆ ನೀಡುವಂತೆ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ(ಎನ್‌ಬಿಇಎಂಎಸ್) ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಅಲೋಕ್ ಆರಾಧೆ ಅವರು ಇದ್ದ ನ್ಯಾಯಪೀಠ, ಈ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಮಂಡಳಿಗೆ ನಿರ್ದೇಶನ ನೀಡಿ, ಎರಡು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ಹೇಳಿತು.
ಫೆಬ್ರುವರಿ 4ರಂದು ಈ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠವು, ಕೇಂದ್ರ ಸರ್ಕಾರ, ಎನ್‌ಬಿಇಎಂಎಸ್ ಹಾಗೂ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ನೋಟಿಸ್ ನೀಡಿತ್ತು.
ದೇಶದಾದ್ಯಂತ 18 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸ್ನಾತಕೋತ್ತರ ಸೀಟುಗಳು ಭರ್ತಿಯಾಗದೇ ಉಳಿದಿರುವ ಕಾರಣ, ಮಂಡಳಿಯು ನೀಟ್-ಪಿಜಿ ಅರ್ಹತೆಗೆ ಸಂಬಂಧಿಸಿದ ಕಟ್‌ಆಫ್ ಪರ್ಸಂಟೈಲ್‌ಗಳನ್ನು ಕಡಿತ ಮಾಡಿತ್ತು.

