ಕಾಸರಗೋಡು: ಪ್ರೀತಿಸುತ್ತಿರುವ ಯುವತಿ ತನ್ನಿಂದ ದೂರವಾಗುತ್ತಿದ್ದಾಳೆ ಎಂಬ ಅನುಮಾನದಿಂದ ಆಕೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಯುವಕನ ವಿರುದ್ಧ ಬೇಕಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಳ್ಳಿಕ್ಕರೆ ಸಮೀಪದ ಪೂಚಕ್ಕಾಡ್ ನಿವಾಸಿ ಯುವಕನ ವಿರುದ್ಧ ಪಾಕ್ಕಂ ಚೆರ್ಕಪ್ಪಾರ ನಿವಾಸಿಯಾದ 20 ವರ್ಷದ ಯುವತಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಪಲ್ಲಿಪ್ಪುಳದಲ್ಲಿ ಘಟನೆ ನಡೆದಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿ ತನ್ನ ಕೂದಲನ್ನು ಹಿಡಿದು ಕಾರಿನೊಳಗೆ ಬಲವಂತವಾಗಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಯುವತಿಯ ದೂರಿನ ಆಧಾರದಲ್ಲಿ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


