ಲಂಡನ್: ಅಮೆರಿಕದಲ್ಲಿ ಶಿಕ್ಷೆಗೊಳಗಾದ ಮಕ್ಕಳ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆ ಸಂಬಂಧ ಹೊಂದಿದ್ದ ಮಾಜಿ ಅಧಿಕಾರಿಯ ವಿಚಾರವಾಗಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಹುದ್ದೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪ್ರತಿಕ್ರಿಯಿಸಿದ ಸ್ಟಾರ್ಮರ್, ದೇಶದ ನಾಯಕತ್ವ ಹಾಗೂ ಜವಾಬ್ದಾರಿಯಿಂದ ದೂರ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಇತ್ತೀಚೆಗೆ ಬಹಿರಂಗವಾದ ಎಪ್ಸ್ಟೀನ್ ಫೈಲ್ ಗಳ ಹಿನ್ನೆಲೆಯಲ್ಲಿ 2024ರಲ್ಲಿ ಯುನೈಟೆಡ್ ಸ್ಟೇಟ್ಸ್ ಗೆ ಯುಕೆ ರಾಯಭಾರಿಯಾಗಿ ಪೀಟರ್ ಮ್ಯಾಂಡೆಲ್ಸನ್ ಅವರನ್ನು ನೇಮಿಸಿದ್ದ ನಿರ್ಧಾರಕ್ಕೆ ಲೇಬರ್ ಪಕ್ಷದ ಕೆಲ ಸದಸ್ಯರಿಂದಲೇ ಟೀಕೆ ವ್ಯಕ್ತವಾಗಿದೆ. ಎಪ್ಸ್ಟೀನ್ ಜೊತೆಗಿನ ಸಂಪರ್ಕಗಳ ಮಾಹಿತಿ ಇದ್ದರೂ ಮ್ಯಾಂಡೆಲ್ಸನ್ ಅವರಿಗೆ ಮಹತ್ವದ ರಾಜತಾಂತ್ರಿಕ ಹುದ್ದೆ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಈ ನೇಮಕಾತಿ ಹಿನ್ನೆಲೆ ಲೇಬರ್ ಪಕ್ಷದ ಕೆಲ ಶಾಸಕರು ಸ್ಟಾರ್ಮರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸ್ಕಾಟ್ಲೆಂಡ್ ಲೇಬರ್ ನಾಯಕ ಅನಸ್ ಸರ್ವರ್, "ತಪ್ಪುಗಳ ಪುನರಾವರ್ತನೆಯ ಬಳಿಕ ನಾಯಕತ್ವ ಬದಲಾವಣೆ ಅಗತ್ಯವಾಗಿದೆ. ಡೌನಿಂಗ್ ಸ್ಟ್ರೀಟ್ ನಲ್ಲಿ ಹೊಸ ನಾಯಕತ್ವ ಬರಬೇಕು" ಎಂದು ಹೇಳಿದ್ದಾರೆ.
►ಹುದ್ದೆ ತ್ಯಜಿಸುವುದಿಲ್ಲ
ರಾಜೀನಾಮೆಗೆ ಒತ್ತಡ ಹೆಚ್ಚುತ್ತಿರುವ ನಡುವೆಯೂ ಸ್ಟಾರ್ಮರ್ "ಹುದ್ದೆ ತ್ಯಜಿಸಲು ಸಿದ್ಧರಿಲ್ಲ" ಎಂದು ಸ್ಪಷ್ಟಪಡಿಸಿದರು. ಸಂಸತ್ತಿನಲ್ಲಿ ಲೇಬರ್ ಶಾಸಕರ ಸಭೆಯಲ್ಲಿ ಮಾತನಾಡಿದ ಅವರು, "ನಾನು ಭಾಗವಹಿಸಿದ ಪ್ರತಿಯೊಂದು ಹೋರಾಟದಲ್ಲೂ ಗೆದ್ದಿದ್ದೇನೆ" ಎಂದು ಹೇಳಿದರು.
"ನಮ್ಮ ದೇಶವನ್ನು ಬದಲಾಯಿಸುವ ಅವಕಾಶಕ್ಕಾಗಿ ಹೋರಾಟ ನಡೆಸಿದ ನಂತರ, ಜನಾದೇಶ ಹಾಗೂ ದೇಶದತ್ತ ಇರುವ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ. ಇತರರು ಮಾಡಿದಂತೆ ದೇಶವನ್ನು ಕೆಟ್ಟ ದಿನಗಳೆಡೆಗೆ ತಳ್ಳುವುದಿಲ್ಲ. ಇದು ನನ್ನ ಹೋರಾಟ ಮಾತ್ರವಲ್ಲ, ನಮ್ಮೆಲ್ಲರ ಹೋರಾಟ" ಎಂದು ಹೇಳಿದರು.
ಡೌನಿಂಗ್ ಸ್ಟ್ರೀಟ್ನಲ್ಲಿ ನಾಯಕತ್ವ ಬದಲಾವಣೆ ಕುರಿತ ಸರ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಲೇಬರ್ ಪಕ್ಷದ ವಕ್ತಾರರು, "ಸ್ಟಾರ್ಮರ್ ಅವರಿಗೆ ಬ್ರಿಟಿಷ್ ಜನರಿಂದ ಸ್ಪಷ್ಟವಾದ ಐದು ವರ್ಷಗಳ ಜನಾದೇಶವಿದೆ. ಬದಲಾವಣೆ ತರುವ ಕಾರ್ಯ ಮುಂದುವರಿಯಲಿದೆ" ಎಂದು ತಿಳಿಸಿದ್ದಾರೆ.
►ರಾಜೀನಾಮೆಗಳ ಸರಣಿ
ಎಪ್ಸ್ಟೀನ್ ಫೈಲ್ ಗಳ ವಿವಾದದ ನಡುವೆ ರಾಜೀನಾಮೆಗಳ ಸರಣಿಯೂ ಮುಂದುವರಿದಿದೆ. ಯುಕೆಯ ಸಂವಹನ ಮುಖ್ಯಸ್ಥ ಟಿಮ್ ಅಲನ್ ಹಾಗೂ ಪ್ರಧಾನಿಯ ಆಪ್ತ ಸಹಾಯಕ, ಮಾಜಿ ಡೌನಿಂಗ್ ಸ್ಟ್ರೀಟ್ ಮುಖ್ಯಸ್ಥ ಮಾರ್ಗನ್ ಮೆಕ್ಸ್ವೀನಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.
ಮೆಕ್ಸ್ವೀನಿ ರವಿವಾರ ರಾಜೀನಾಮೆ ನೀಡಿ, ಪೀಟರ್ ಮ್ಯಾಂಡೆಲ್ಸನ್ ಅವರನ್ನು ರಾಜತಾಂತ್ರಿಕ ಹುದ್ದೆಗೆ ಆಯ್ಕೆ ಮಾಡಲು ತಾವು ಸಲಹೆ ನೀಡಿದ್ದನ್ನು ಒಪ್ಪಿಕೊಂಡರು. ಸೋಮವಾರ ಟಿಮ್ ಅಲನ್ ಕೂಡ ರಾಜೀನಾಮೆ ನೀಡಿ, "ಹೊಸ ನಂ.10 ತಂಡ ನಿರ್ಮಿಸಲು ಅವಕಾಶ ಕಲ್ಪಿಸಲು ಕೆಳಗಿಳಿಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
►ಸ್ಟಾರ್ಮರ್ ಗೆ ಬೆಂಬಲ
ಲೇಬರ್ ಪಕ್ಷದ ಕೆಲ ಹಿರಿಯ ನಾಯಕರು ಸ್ಟಾರ್ಮರ್ ಪರವಾಗಿ ಬಹಿರಂಗ ಬೆಂಬಲ ಸೂಚಿಸಿದ್ದಾರೆ. ಉಪ ಪ್ರಧಾನಿ ಡೇವಿಡ್ ಲ್ಯಾಮಿ, ಹಣಕಾಸು ಸಚಿವೆ ರಾಚೆಲ್ ರೀವ್ಸ್, ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಸೇರಿದಂತೆ ಹಲವರು ಪ್ರಧಾನಿಯ ಬೆಂಬಲಕ್ಕೆ ನಿಂತಿದ್ದಾರೆ.
ಡೇವಿಡ್ ಲ್ಯಾಮಿ ಎಕ್ಸ್ ನಲ್ಲಿ, "ಬ್ರಿಟನ್ ಅನ್ನು ಬದಲಾಯಿಸುವ ನಮ್ಮ ಧ್ಯೇಯದಿಂದ ಬೇರೆಡೆಗೆ ಸೆಳೆಯಲು ಅವಕಾಶ ಕೊಡಬಾರದು" ಎಂದು ಬರೆದಿದ್ದಾರೆ. ಲೇಬರ್ ಸರ್ಕಾರ ಉದ್ಯೋಗ ಹಕ್ಕುಗಳ ಕಾಯ್ದೆ, ಬಾಡಿಗೆದಾರರ ಹಕ್ಕುಗಳು, ಉಚಿತ ಶಾಲಾ ಊಟ ಸೇರಿದಂತೆ ಹಲವು ಸಾಮಾಜಿಕ ಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಯುಕೆ ಮಾಜಿ ಉಪ ಪ್ರಧಾನಿ ಏಂಜೆಲಾ ರೇನರ್, ಮ್ಯಾಂಡೆಲ್ಸನ್-ಎಪ್ಸ್ಟೀನ್ ಸಂಬಂಧ "ಆಘಾತಕಾರಿ" ಎಂದರೂ, ಸರ್ಕಾರದ ಸಾಮಾಜಿಕ ಕಲ್ಯಾಣ ಕ್ರಮಗಳನ್ನು ಮೆಚ್ಚಿ ಸ್ಟಾರ್ಮರ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಯೆವೆಟ್ ಕೂಪರ್ ಕೂಡ ಜಾಗತಿಕ ವೇದಿಕೆಯಲ್ಲಿ ಈ ಸಮಯದಲ್ಲಿ ಸ್ಟಾರ್ಮರ್ ನಾಯಕತ್ವ ಅಗತ್ಯವಿದೆ ಎಂದು ಹೇಳಿದ್ದಾರೆ.
2008ರಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಳಿಕವೂ ಜೆಫ್ರಿ ಎಪ್ಸ್ಟೀನ್ ಜೊತೆ ಸಂಪರ್ಕ ಮುಂದುವರಿಸಿದ್ದ ಹಿನ್ನೆಲೆಯಲ್ಲಿ, ಪೀಟರ್ ಮ್ಯಾಂಡೆಲ್ಸನ್ ಅವರನ್ನು ಕಳೆದ ವರ್ಷ ಅಮೆರಿಕದ ರಾಯಭಾರಿ ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಜನವರಿ 30ರಂದು ಅಮೆರಿಕ ನ್ಯಾಯ ಇಲಾಖೆ ಬಿಡುಗಡೆ ಮಾಡಿದ ಹೊಸ ಫೈಲ್ ಗಳು ಮ್ಯಾಂಡೆಲ್ಸನ್-ಎಪ್ಸ್ಟೀನ್ ಸಂಪರ್ಕಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದ್ದು, ಯುನೈಟೆಡ್ ಕಿಂಗ್ಡಮ್ನಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಕಳೆದ ವಾರ ಸ್ಟಾರ್ಮರ್, ಎಪ್ಸ್ಟೀನ್ ಸಂತ್ರಸ್ತರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ, "ನ್ಯಾಯ ವಿಳಂಬವಾಗುವುದನ್ನೂ ನಿರಾಕರಿಸಲ್ಪಡುವುದನ್ನೂ ನಾವು ಕಂಡಿದ್ದೇವೆ" ಎಂದು ಹೇಳಿದರು. ಮ್ಯಾಂಡೆಲ್ಸನ್ ಸರ್ಕಾರವನ್ನು ದಾರಿ ತಪ್ಪಿಸಿದ್ದರೆಂಬ ದಾಖಲೆಗಳನ್ನು ಬಹಿರಂಗಪಡಿಸುವುದಾಗಿ ಭರವಸೆ ನೀಡಿದರೂ, ಅವು ಯಾವಾಗ ಹೊರಬರುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಇದೇ ವೇಳೆ, ಸಂವೇದನಾಶೀಲ ಮಾಹಿತಿ ಹಂಚಿಕೆ ಆರೋಪದ ಹಿನ್ನೆಲೆ ಮ್ಯಾಂಡೆಲ್ಸನ್ ವಿರುದ್ಧ ಪೊಲೀಸ್ ತನಿಖೆ ಮುಂದುವರಿದಿದೆ.

