ಯುದ್ಧದ ನಡುವೆಯೂ ಇರಾನ್ ಹೊಸ 10 ಮಿಲಿಯನ್ ಮೌಲ್ಯದ ರಿಯಾಲ್ ನೋಟನ್ನು ಬಿಡುಗಡೆ ಮಾಡಿದೆ. ಇದನ್ನು ಈವರೆಗೆ ಬಿಡುಗಡೆಯಾದ ಅತ್ಯಧಿಕ ಮುಖಬೆಲೆಯ ನೋಟು ಎಂದು ವರದಿಯಾಗಿದೆ.
ಸದ್ಯ ಇಸ್ರೇಲ್ ಹಾಗೂ ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇರಾನ್ ಹೊರ್ಮುರ್ಜ್ ಜಲಸಂಧಿಗೆ ಟೋಲ್ ವಿಧಿಸಲು ಮುಂದಾಗಿದೆ.
ಟ್ರಂಪ್, ಜಲಸಂಧಿಯನ್ನು ತೆರವುಗೊಳಿಸುವಂತೆ ಗಡುವು ನೀಡಿದ್ದಾರೆ. ಈ ನಡುವೆ ಇರಾನ್‌ನ ಆರ್ಥಿಕತೆಯ ಮೇಲೂ ಯುದ್ಧದ ಬಿಸಿ ತಟ್ಟಿದೆ. ಹಣ ದುಬ್ಬರವನ್ನು ತಡೆಯಲು ಇರಾನ್ ತನ್ನ ಹೊಸ ಮುಖಬೆಲೆಯ ನೋಟನ್ನು ಪರಿಚಯಿಸಿರುವುದಾಗಿ ವರದಿಯಾಗಿದೆ.
ಇರಾನ್‌ನ ಅತಿ ಹೆಚ್ಚು ಮುಖಬೆಲೆಯ ನೋಟ್ ಎಂದು ಹೇಳಲಾದರೂ, ಭಾರತೀಯ ರೂಪಾಯಿಯ ಲೆಕ್ಕದಲ್ಲಿ ಇದರ ಮೌಲ್ಯ ₹650 ಆಗಿದೆ. ಯುದ್ಧದಿಂದಾಗಿ ದಿನನಿತ್ಯ ಬಳಕೆ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಜನರ ದೈನಂದಿನ ವಸ್ತುಗಳ ಖರೀದಿಗೆ ಹೆಚ್ಚು ಹಣ ಬೇಕಾಗುತ್ತದೆ. ಆದ್ದರಿಂದ ವಹಿವಾಟುಗಳನ್ನು ಇನ್ನಷ್ಟು ಸುಲಭಗೊಳಿಸಲು ಈ ನೋಟನ್ನು ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯುದ್ಧದ ಬಿಕ್ಕಟ್ಟಿನಿಂದಾಗಿ ಡಿಜಿಟಲ್ ಪಾವತಿ ಸೇವಗಳು ರದ್ದಾಗಬಹುದೆಂಬ ನಿರೀಕ್ಷೆಯಿಂದ ಜನರು ನಗದು ಹಣವನ್ನು ಪಡೆಯಲು ಬ್ಯಾಂಕ್‌ಗಳಿಗೆ ಧಾವಿಸುತ್ತಿದ್ದಾರೆ. ಇದರಿಂದಾಗಿ ಇರಾನ್‌ನ ಬ್ಯಾಂಕ್‌ಗಳು ಮತ್ತು ಎಟಿಎಂಗಳಲ್ಲಿ ದೀರ್ಘ ಸರತಿ ಸಾಲುಗಳಲ್ಲಿ ಜನರು ನಿಲ್ಲುತ್ತಿದ್ದಾರೆ. ನೋಟಿನ ಮುಖಬೆಲೆ ಹೆಚ್ಚಿದ್ದರೂ ಹಣದುಬ್ಬರದ ಕಾರಣದಿಂದಾಗಿ ಸೀಮಿತ ವಸ್ತುಗಳನ್ನು ಮಾತ್ರ ಖರೀದಿ ಮಾಡಲು ಸಾಧ್ಯವಾಗುತ್ತಿದೆ.
ಇರಾನ್‌ನ ಆರ್ಥಿಕತೆ ಹಲವು ವರ್ಷಗಳಿಂದಲೂ ನಿರಂತರವಾಗಿ ಕೆಳಮುಖವಾಗಿದೆ. ಅಂತರರಾಷ್ಟ್ರೀಯ ನಿರ್ಬಂಧಗಳು, ಜಾಗತಿಕ ಹಣಕಾಸು ವ್ಯವಸ್ಥೆಗಳಿಗೆ ನಿರ್ಬಂಧ ಮತ್ತು ನಿರಂತರ ದೇಶೀಯ ಸವಾಲುಗಳಿಂದ ಇರಾನ್ ಆರ್ಥಿಕತೆ ಕುಸಿತ ಕಂಡಿದೆ. ಯುದ್ಧವು ಇನ್ನಷ್ಟು ಅರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆ.

