ಪೋರ್ಟ್ ಆರ್ಥರ್, ಟೆಕ್ಸಾಸ್ : ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವಾಗಲೇ ದೂರದ ಅಮೆರಿಕದ ಟೆಕ್ಸಾಸ್ ರಾಜ್ಯದ ಪೋರ್ಟ್ ಆರ್ಥರ್‌ನಲ್ಲಿರುವ ವ್ಯಾಲೆರೊ ಆಯಿಲ್ ರಿಫೈನರಿಯಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದೆ.
ಸ್ಫೋಟದ ಪರಿಣಾಮ ಘಟಕದಲ್ಲಿ ಭಾರಿ ಬೆಂಕಿ, ಹೊಗೆ ಎದ್ದಿದ್ದು ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
ಘಟನೆಯಲ್ಲಿ ಯಾರೂ ಸತ್ತಿಲ್ಲ, ಗಾಯಗೊಂಡಿಲ್ಲ ಎಂದು ಪೋರ್ಟ್ ಆರ್ಥರ್ ಮೇಯರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೂಸ್ಟನ್‌ನಿಂದ 145 ಕಿ.ಮೀ ದೂರ ಇರುವ ಪೋರ್ಟ್ ಆರ್ಥರ್ ವ್ಯಾಲೆರೊ ಆಯಿಲ್ ರಿಫೈನರಿಯಲ್ಲಿ ಪ್ರತಿದಿನ 4,35,000 ಬ್ಯಾರೆಲ್ ಕಚ್ಚಾತೈಲ ತಯಾರಾಗುತ್ತದೆ. ಈ ಘಕಟ ಅಮೆರಿಕದ ಅತಿದೊಡ್ಡ ರಿಫೈನರಿ ಆಗಿದೆ.
ಈ ಘಟಕದಲ್ಲಿ 770 ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ, ಸ್ಫೋಟ ಸಂಭವಿಸಿದ ತಕ್ಷಣವೇ ಅಗ್ನಿಶಾಮಕ ತಂಡ ಪರಿಹಾರ ಕಾರ್ಯಾಚರಣೆ ಕೈಗೊಂಡಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೇಯರ್ ತಿಳಿಸಿದ್ದಾರೆ.
ಈ ಘಟನೆಯಿಂದ ಅಮೆರಿಕದಲ್ಲೂ ಇಂಧನ ಬೆಲೆ ಹೆಚ್ಚಳವಾಗುವ ಸಂಭವ ಇದೆ. ಅಲ್ಲದೇ ಈ ದಾಳಿಯ ಹಿಂದೆ ಇರಾನ್ ಕೈವಾಡ ಇರಬಹುದು ಎನ್ನಲಾಗಿದೆ. ಇನ್ನೂ ಕೆಲವರು ರಿಫೈನರಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ಇದು ಎಂದು ಹೇಳಲಾಗಿದೆ.

