ನವದೆಹಲಿ: ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಏಕರೂಪ ವ್ಯಾಖ್ಯಾನವನ್ನು ನೀಡುವ ಕಾರ್ಯವನ್ನು ವಹಿಸಲಾಗಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿಯ (ಸಿಇಸಿ) 10 ಸದಸ್ಯರ ಉನ್ನತಾಧಿಕಾರ ತಜ್ಞ ಸಮಿತಿಗೆ ತನ್ನ ಆಕ್ಷೇಪವಿಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉನ್ನತಾಧಿಕಾರ ತಜ್ಞ ಸಮಿತಿಗೆ ಸೂಚಿಸಲಾಗಿರುವ ಹೆಸರುಗಳನ್ನು ಅನುಮೋದಿಸಿದೆ. ಸಮಿತಿಯು ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್), ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಮತ್ತು ಭಾರತೀಯ ಸಮೀಕ್ಷೆಯ ಹಾಲಿ ಮತ್ತು ನಿವೃತ್ತ ಅಧಿಕಾರಿಗಳನ್ನು ಒಳಗೊಂಡಿದೆ.
ಈ ಹಂತದಲ್ಲಿ ಸಮಿತಿಯಲ್ಲಿ ಸೇರ್ಪಡೆಗೆ ಯಾವುದೇ ಹೆಚ್ಚುವರಿ ಹೆಸರುಗಳನ್ನು ತಾನು ಸೂಚಿಸುವುದಿಲ್ಲ ಎಂದು ಸಚಿವಾಲಯವು ಅಫಿಡವಿತ್‌ನಲ್ಲಿ ತಿಳಿಸಿದೆ.
ಸಚಿವಾಲಯವು ತನ್ನ ಅಫಿಡವಿತ್‌ನಲ್ಲಿ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳಿಗೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಸಮಾಲೋಚನೆ ಸೇರಿದಂತೆ ಸಂಬಂಧಿತ ಕ್ಷೇತ್ರಗಳ ವಿಷಯ ತಜ್ಞರ ಗುಂಪಿನಿಂದ ಸಮಗ್ರ ಮತ್ತು ವಿಶ್ಲೇಷಣಾತ್ಮಕ ಪರಿಶೀಲನೆಯ ಅಗತ್ಯವಿದೆ ಎಂದು ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ಫೆ.26ರಂದು ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳನ್ನು ವ್ಯಾಖ್ಯಾನಿಸುವ ಸಮಿತಿಗೆ ವಿಷಯ ತಜ್ಞರ ಹೆಸರುಗಳನ್ನು ಸೂಚಿಸುವಂತೆ ಪರಿಸರ ಸಚಿವಾಲಯ ಮತ್ತು ಸಂಬಂಧಿಸಿದ ಇತರರಿಗೆ ಸೂಚಿಸಿತ್ತು ಮತ್ತು ಈ ಪ್ರದೇಶದಲ್ಲಿ ಕಾನೂನುಬದ್ಧ ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಿತ್ತು.

