ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹114.98 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ರಿಲಯನ್ಸ್ ಟೆಲಿಕಾಂನ ಇಬ್ಬರು ಮಾಜಿ ನಿರ್ದೇಶಕರ ನಿವಾಸ ಮತ್ತು ಕಂಪನಿಯ ಕಚೇರಿ ಮೇಲೆ ಗುರುವಾರ ದಾಳಿ ನಡೆಸಿದೆ.
'ರಿಲಯನ್ಸ್ ಟೆಲಿಕಾಂನಲ್ಲಿ ನಿರ್ದೇಶಕರಾಗಿದ್ದ ಸತೀಶ್ ಸೇಠ್, ಗೌತಮ್ ಬಿ ದೋಶಿ ಸೇರಿದಂತೆ ಹಲವರ ವಿರುದ್ಧ ವಂಚನೆ ಮತ್ತು ಒಳಸಂಚು ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಅಡಿ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ' ಎಂದು ಸಿಬಿಐ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
₹114.98 ಕೋಟಿ ನಷ್ಟ ಉಂಟು ಮಾಡಿರುವ ಕುರಿತು ಎಸ್‌ಬಿಐ ದೂರು ನೀಡಿತ್ತು. ರಿಲಯನ್ಸ್ ಟೆಲಿಕಾಂ ಲಿಮಿಟೆಡ್‌ಗೆ ₹ 735 ಕೋಟಿ ಅವಧಿ ಸಾಲ (ಟರ್ಮ್ ಲೋನ್) ನೀಡಿದ್ದ 11 ಬ್ಯಾಂಕ್‌ಗಳ ಒಕ್ಕೂಟದಲ್ಲಿ ಎಸ್‌ಬಿಐ ಕೂಡಾ ಒಂದಾಗಿತ್ತು ಎಂದು ಸಿಬಿಐ ತಿಳಿಸಿದೆ.
'ಸತೀಶ್ ಸೇಠ್ ಮತ್ತು ಗೌತಮ್ ಬಿ.ದೋಶಿ ಅವರ ಮುಂಬೈನಲ್ಲಿರುವ ನಿವಾಸಗಳು ಮತ್ತು ರಿಲಯನ್ಸ್ ಟೆಲಿಕಾಂನ ನೋಂದಾಯಿತ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ಸಾಲ ಮಂಜೂರಾತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ವಕ್ತಾರರು ತಿಳಿಸಿದ್ದಾರೆ.

