ತಿರುವನಂತಪುರಂ: ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಒಟ್ಟು 1,202 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗವು ಸೋಮವಾರ ತಿಳಿಸಿದೆ.
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಮಾರ್ಚ್ 23) ಕೊನೆಯ ದಿನವಾಗಿತ್ತು.
ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಏ.9ರಂದು ಮತದಾನ ನಡೆಯಲಿದೆ.
ಒಟ್ಟು 1,202 ಅಭ್ಯರ್ಥಿಗಳಿಂದ 2,039 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ. ಮಾರ್ಚ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಇದುವರೆಗೂ ನೀತಿ ಸಂಹಿತೆ ಮತ್ತು ಚುನಾವಣಾ ಅಕ್ರಮದ ಕುರಿತಾದ 43,221 ಪ್ರಕರಣಗಳು ದಾಖಲಾಗಿದ್ದು, 43,037 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸೋಮವಾರ(ಮಾ.23) ಒಂದೇ ದಿನ 8,084 ಪ್ರಕರಣಗಳು ದಾಖಲಾಗಿದ್ದು, 7,910 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಚುನಾವಣಾ ಆಕ್ರಮದ ಭಾಗವಾಗಿದ್ದ ₹350.38 ಲಕ್ಷ ಮೌಲ್ಯದ ವಸ್ತುಗಳನ್ನು ಇಂದು (ಮಾರ್ಚ್ 23) ಒಂದೇ ದಿನ ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹2,968.16 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 1,18,202 ಬಾರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ವರದಿಯಾಗಿದೆ. ಅದರಲ್ಲಿ 1,80,472 ಪ್ರಕರಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

