ತಿರುವನಂತಪುರಂ: 'ಗುರುವಾಯೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ದಶಕಗಳಿಂದ ಹಿಂದೂಗಳು ಶಾಸಕರಾಗಿ ಆಯ್ಕೆಯಾಗಿಲ್ಲ' ಎಂಬ ಗುರುವಾಯೂರು ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಅವರ ಹೇಳಿಕೆಯನ್ನು ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ಸಮರ್ಥಿಸಿಕೊಂಡಿದ್ದಾರೆ.
'ಗೋಪಾಲಕೃಷ್ಣನ್ ಅವರು ಯಾರ ವಿರುದ್ಧವೂ ಮಾತನಾಡಿಲ್ಲ. ಭಕ್ತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿ ಇರಿಸಿಕೊಂಡು, ಗುರುವಾಯೂರಿನಂತಹ ಕ್ಷೇತ್ರದಲ್ಲಿ ನಂಬಿಕೆಯುಳ್ಳ ವ್ಯಕ್ತಿ ಶಾಸಕನಾಗಿ ಆಯ್ಕೆಯಾಗಬೇಕು ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಈ ಹೇಳಿಕೆಯನ್ನು ದ್ವೇಷ ಭಾಷಣ ಎಂದು ಕರೆಯಲು ಹೇಗೆ ಸಾಧ್ಯ' ಎಂದು ರಾಜೀವ್ ಪ್ರಶ್ನಿಸಿದ್ದಾರೆ.
'ಬೇರೆ ಧರ್ಮದ ವ್ಯಕ್ತಿ ವ್ಯಾಟಿಕನ್‌ನಲ್ಲಿ ಜನಪ್ರತಿನಿಧಿಯಾಗಲು ಸಾಧ್ಯವೇ ಅಥವಾ ಹಿಂದೂ ಧರ್ಮದವರು ಮೆಕ್ಕಾದಲ್ಲಿ ಅಂತಹ ಸ್ಥಾನವನ್ನು ಅಲಂಕರಿಸಲು ಸಾಧ್ಯವೇ' ಎಂದೂ ಅವರು ಪ್ರಶ್ನಿಸಿದ್ದಾರೆ.
'ಗೋಪಾಲಕೃಷ್ಣನ್ ಕೂಡ ಇಂತಹ ಪ್ರಶ್ನೆಗಳನ್ನೇ ಕೇಳಿದ್ದರು. ಇವುಗಳ ಬಗ್ಗೆ ಅಸಹಿಷ್ಣುತೆ ತೋರಿಸಬಾರದು. ಚರ್ಚೆಗಳು ಇದೇ ರೀತಿಯಲ್ಲಿ ನಡೆಯಬೇಕು' ಎಂದು ಹೇಳಿದ್ದಾರೆ.
ಪ್ರಕರಣ ದಾಖಲು: ಗುರುವಾಯೂರು ಕ್ಷೇತ್ರದ ಚುನಾವಣಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಬಿ. ಗೋಪಾಲಕೃಷ್ಣನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗೋಪಾಲಕೃಷ್ಣನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತಾರೂಢ ಸಿಪಿಎಂ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

