ಕಾಸರಗೋಡು: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇರಳದ ಶ್ರೇಷ್ಠತೆಯನ್ನು ಹೆಚ್ಚಿಸಲು ನಾಗರಿಕ ಸೇವಾ ಪರೀಕ್ಷಾ ತರಬೇತಿ ಸೇರಿದಂತೆ ನವೀನ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ತಿಳಿಸಿದ್ದಾರೆ. ಅವರು ಜಿಪಂ 2026-27ನೇ ಸಾಲಿನ ಬಜೆಟ್ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯನ್ನು ಹೈಟೆಕ್, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಯೋಜನೆಯಿರಿಸಿಕೊಳ್ಳಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಉಪಾಹಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಿಪಂ, ಆಸ್ಪತ್ರೆ ನಿರ್ವಹಣಾ ಸಮಿತಿ ಮತ್ತು ಸ್ವಯಂಸೇವಾ ಗುಂಪುಗಳು ಜಂಟಿಯಾಗಿ ಅನುಷ್ಠಾನಗೊಳಿಸಲಿದೆ. ಜಿಲ್ಲೆಯಲ್ಲಿ ನೀರಿನ ಸುರಕ್ಷತೆಗಾಗಿ 100 ನೀರಿನ ಮೂಲಗಳನ್ನು ಗುರುತಿಸಿ, ಇಲ್ಲಿ ಸುಸ್ಥಿರ ಕೃಷಿಗಾಗಿ ಕ್ರಿಯಾ ಯೋಜನೆU ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಎರಡು ಬೀಜೋತ್ಪಾದನಾ ಕೇಂದ್ರಗಳಲ್ಲಿ ಪ್ರಾರಂಭಿಸುವುದು, ವಲಸಿಗರ ಪುನರ್ವಸತಿಗಾಗಿ ಡೇಟಾ ಬ್ಯಾಂಕ್ ಸ್ಥಾಪನೆ ಜತೆಗೆ ಜಿಲ್ಲಾ ಮಟ್ಟದಲ್ಲಿ ಯುವಕರಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ಜಿಲ್ಲೆಯಲ್ಲಿ ಲಭ್ಯವಿರುವ ಹಲಸು ಮತ್ತು ಮಾವಿನ ಹಣ್ಣುಗಳನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಪ್ರಾರಂಭಿಸಲಾಗುವುದು. ಕೃತಕ ಬುದ್ಧಿಮತ್ತೆ.ವ್ಯಕ್ತಿತ್ವ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ಸ್ಕಿಲ್ ಹಬ್ ಪ್ಯಾಕೇಜ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಮಿಗತೆ ಬಜೆಟ್:
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಕೆ.ಸೋಯಾ 2026-27ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದರು. ಒಟ್ಟು 126,67,67,040ರೂ. ಆದಾಯ ಹಾಗೂ 100,66,30,000 ವಚ್ಚ ಅಂದಾಜಿಸಲಾಗಿರುವ 26,013, 7040ರೂ. ಮೊತ್ತದ ಮಿಗತೆ ಬಜೆಟ್ ಇದಾಗಿದೆ. ಮೂಲಸೌಕರ್ಯ, ಶಿಕ್ಷಣ, ಕೃಷಿ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ಆದ್ಯತೆ ಕಲ್ಪಿಸಲಾಗಿದೆ. ಕೆರೆಗಳ ಪುನಶ್ಚೇತನ, ಭತ್ತ ಬೇಸಾಯದ ಅಭಿವೃದ್ಧಿ, ನೀರವರಿ ಯೋಜನೆ, ಮಣ್ಣು-ಜಲ ಸಂರಕ್ಷಣೆಗಾಗಿ 3.89ಕೋಟಿ ರೂ. ಮೀಸಲಿರಿಸಲಾಗಿದೆ. ತೆಂಗು ಅಭಿವೃದ್ಧಿಗಾಗಿ 50ಲಕ್ಷ, ಸಮಗ್ರ ಬೋಜೋತ್ಪದನೆ ಮತ್ತು ವಿತರಣೆಗಾಗಿ 2.8ಕೋಟಿ, ಕಾಸರಗೋಡು ಬೀಜೋತ್ಪಾದನಾ ಕೇಂದ್ರದಲ್ಲಿ ಅಗ್ರಿ ಕಾಂಪ್ಲೆಕ್ಸ್ ನಿರ್ಮಣಕ್ಕಾಗಿ 50ಲಕ್ಷ, ಹಾಲು ಅಭಿವೃದ್ಧಿಗೆ 1.40ಕೋಟಿ, ವಸತಿ ಯೋಜನೆಗೆ 6.85ಕೋಟಿ, ಶಿಕ್ಷಣ ವಲಯದ ಅಭಿವೃದ್ಧಿಗೆ 10.3ಕೋಟಿ, ಆರೋಗ್ಯ ಕ್ಷೇತ್ರಕ್ಕೆ 6.26ಕೋಟಿ, ಹಿರಿಯ ನಾಗರಿಕರಿಗಾಗಿ ಹ್ಯಾಪಿನೆಸ್ ಕೇಂದ್ರಗಳಿಗೆ 72ಲಕ್ಷ ರೂ., ಮೂಲ ಸೌಕರ್ಯ ಅಭಿವೃದ್ಧಿಯನ್ವಯ ರಸ್ತೆಗಳ ನವೀಕರಣ, ಕಟ್ಟಡಗಳ ನಿರ್ಮಾಣಕ್ಕೆ ಪೂರಕ ಯೋಜನೆಗಳಿಗೆ 25ಕೋಟಿ ರೂ.ಮೀಸಲಿರಿಸಲಾಗಿದೆ.
ಜಿಲ್ಲೆಯ ಸಮಗ್ರ ಬೆಳವಣಿಗೆ ಮತ್ತು ಜನರ ಕಲ್ಯಾಣವನ್ನು ಗುರಿಯಾಗಿರಿಸಿಕೊಂಡು ಕೃಷಿ, ವಸತಿ, ಶಿಕ್ಷಣ ಮತ್ತು ಆರೋಗ್ಯವು ಪ್ರಮುಖ ಗಮನ ಕ್ಷೇತ್ರಗಳಾಗಿವೆ.ವಲಯಗಳಿಗೆ ವಿಶೇಷ ಒತ್ತು ನೀಡುವ ಈ ಬಜೆಟ್ ಇದಾಗಿದ್ದು, 2026 ಅನ್ನು ಮಹಿಳಾ ರೈತರ ವರ್ಷವೆಂದು ಘೋಷಿಸುವ ಭಾಗವಾಗಿ, ಕೃಷಿ ವಲಯದಲ್ಲಿ ಪ್ರಮುಖ ಪುನರುಜ್ಜೀವನವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಕೆ.ಕೆ ಸೋಯಾ ತಿಳಿಸಿದರು.



