2022ರಲ್ಲಿ ವರದ್ ಬಾಲ್ಯದಿಂದಲೂ ಕಾಣುತ್ತಿದ್ದ ಕನಸು ನನಸಾಯಿತು. ಆತನಿಗೆ ಐಐಟಿಯಲ್ಲಿ ಸೀಟು ಸಿಕ್ಕಿತು. ವರದ್ ದಿಲ್ಲಿಯಲ್ಲಿರುವ ಐಐಟಿ-ದೆಹಲಿ ಸಂಸ್ಥೆಯಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದ.
ಅವನಿಗೆ ಅಲ್ಲಿ ಬಿಟೆಕ್ ಸೀಟು ಸಿಗಲಿಲ್ಲ, ಆದರೆ ಅವನು ಪಟ್ಟು ಬಿಡಲಿಲ್ಲ. ಎಂಟೆಕ್ ಫಲಿತಾಂಶ ಬಂದಾಗ ಕುಟುಂಬ ಸಿಹಿತಿಂಡಿ ಹಂಚಿತು. "ಅವನ ಕನಸು ನಮ್ಮದು ಕೂಡಾ" ಎಂದು ಅನಿಸಿತ್ತು. ಆದರೆ... ಸಂಜಯ್ ಅವರ ದನಿ ಗದ್ಗದಿತವಾಯಿತು. "ಐಐಟಿ-ದೆಹಲಿ ನನ್ನಿಂದ ಅವನನ್ನು ಕಸಿದುಕೊಳ್ಳುತ್ತದೆ ಎಂದು ತಿಳಿದಿದ್ದರೆ, ನಾನು ಅವನನ್ನು ಎಂದಿಗೂ ಕಳುಹಿಸುತ್ತಿರಲಿಲ್ಲ. ಓಹ್ ವರದ್... ನೀನು ಯಾಕೆ ಇಷ್ಟು ಬೇಗ ನಮ್ಮನ್ನು ಬಿಟ್ಟು ಹೊರಟೆ?" ಎಂದು ಅವರು ಕಣ್ಣೀರಾದರು.
2024ರ ಫೆಬ್ರವರಿ 15ರಂದು ವರದ್ ಐಐಟಿ-ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. 2021ರಿಂದ ಐಐಟಿ-ದೆಹಲಿಯಲ್ಲಿ ನಡೆದ 65 ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಇದೂ ಒಂದು; ಐಐಟಿ-ದೆಹಲಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣಗಳಲ್ಲಿ ಎಂಟನೆಯದು. ವರದ್‌ಗೆ ಆಗ 26 ವರ್ಷ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕೆಲ ದಿನಗಳ ಹಿಂದೆ ತೀವ್ರ ಶೈಕ್ಷಣಿಕ ಒತ್ತಡ ಮತ್ತು ಮೇಲ್ವಿಚಾರಕರಿಂದ ಬಂದ ಒತ್ತಡದ ಬಗ್ಗೆ ತಾಯಿಗೆ ಹೇಳಿದ್ದ.
ಪ್ರತಿಷ್ಠಿತ 'ಐಐಟಿ'
ಭಾರತದಲ್ಲಿ ಐಐಟಿಗೆ ಪ್ರವೇಶವು ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿದೆ. 2025ರಲ್ಲಿ ಸುಮಾರು 1.3 ಮಿಲಿಯನ್ ವಿದ್ಯಾರ್ಥಿಗಳು ಜಂಟಿ ಪ್ರವೇಶ ಪರೀಕ್ಷೆ (JEE Main) ಬರೆದಿದ್ದಾರೆ. ಇದರಲ್ಲಿ ಮುಂದಿನ ಹಂತಕ್ಕೆ ಸುಮಾರು 2,50,000 ಮಂದಿ ಮಾತ್ರ ಅರ್ಹತೆ ಪಡೆದರು. ಇದನ್ನು ಜೆಇಇ ಅಡ್ವಾನ್ಸ್ಡ್ ಎಂದು ಕರೆಯಲಾಗುತ್ತದೆ, ಇದು ಐಐಟಿಗಳಲ್ಲಿ ಕೇವಲ 18,000 ಬಿಟೆಕ್ ಸೀಟುಗಳಿಗೆ ಸ್ಪರ್ಧಿಸಲು ಅಂತಿಮ ಹಂತವಾಗಿದೆ. ಸೀಟುಗಳನ್ನು ಶ್ರೇಣಿ, ವರ್ಗ ಮತ್ತು ಆದ್ಯತೆಗಳ ಆಧಾರದ ಮೇಲೆ ಹಂಚಲಾಗುತ್ತದೆ.
ಎಂಟೆಕ್ ಕಾರ್ಯಕ್ರಮಗಳಿಗೆ ವಾರ್ಷಿಕವಾಗಿ 8,00,000ರಿಂದ 10,00,000 ಅಭ್ಯರ್ಥಿಗಳು GATE ಪರೀಕ್ಷೆಗೆ ಹಾಜರಾಗುತ್ತಾರೆ. ಇವರಲ್ಲಿ ಸುಮಾರು 8,500 ಮಂದಿ ಪ್ರವೇಶ ಪಡೆಯುತ್ತಾರೆ. ಅಂದರೆ ಸರಾಸರಿ ಬಿಟೆಕ್‌ನಲ್ಲಿ 72ರಲ್ಲಿ ಒಬ್ಬರು ಮತ್ತು ಎಂಟೆಕ್ ಕೋರ್ಸ್‌ಗಳಲ್ಲಿ 117ರಲ್ಲಿ ಒಬ್ಬರು ಮಾತ್ರ ಆಯ್ಕೆಯಾಗುತ್ತಾರೆ.
ಐಐಟಿಗಳಲ್ಲಿ ಪಿಎಚ್‌ಡಿ ಸೀಟುಗಳ ಸಂಖ್ಯೆ ಪ್ರತಿ ವರ್ಷ ಬದಲಾಗುತ್ತದೆ. ಇದು ಪ್ರಾಧ್ಯಾಪಕರ ಬಳಿಯಿರುವ ಖಾಲಿ ಮಾರ್ಗದರ್ಶನ ಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ.
ದಶಕಗಳಿಂದ ಐಐಟಿಗಳು ಜಾಗತಿಕ ನಾಯಕರಿಗೆ ಲಾಂಚ್‌ಪ್ಯಾಡ್ ಆಗಿವೆ. ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಐಬಿಎಂ ಸಿಇಒ ಅರವಿಂದ್ ಕೃಷ್ಣ ಅವರಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳು ಐಐಟಿಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಕಾರ್ಪೊರೇಟ್ ಜಗತ್ತಿನ ಹೊರತಾಗಿ, ಐಐಟಿಯಲ್ಲಿ ಕಲಿತವರಲ್ಲಿ 35ಕ್ಕೂ ಹೆಚ್ಚು ಭಾರತೀಯ ಶತಕೋಟ್ಯಾಧಿಪತಿಗಳು, ಅನೇಕ ರಾಜಕಾರಣಿಗಳು, ಬರಹಗಾರರು ಮತ್ತು ಪತ್ರಕರ್ತರು ಇದ್ದಾರೆ.
AI ಆಧಾರಿತ ವೃತ್ತಿ ದತ್ತಾಂಶ ವೇದಿಕೆ 6figr.com ಪ್ರಕಾರ, ಅಮೆರಿಕದಲ್ಲಿ ಕೆಲಸ ಮಾಡುವ ಐಐಟಿ ಪದವೀಧರರ ಸರಾಸರಿ ವಾರ್ಷಿಕ ವೇತನವು 216,000 ರಿಂದ 235,000 ಡಾಲರ್ ನಡುವೆ ಇರುತ್ತದೆ. ಇದು ಅಲ್ಲಿ ಇರುವ ರಾಷ್ಟ್ರೀಯ ಸರಾಸರಿ ವೇತನಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು.
ಗ್ಲೋಬಲ್ ಐಐಟಿ-ಐಐಎಂ ಅಲುಮ್ನಿ ಸಪೋರ್ಟ್ ಗ್ರೂಪ್‌ನ ಸಂಸ್ಥಾಪಕ ಧೀರಜ್ ಸಿಂಗ್, ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಮಾನಸಿಕ ಬೆಂಬಲ ಒದಗಿಸುವ ಕೆಲಸ ಮಾಡುತ್ತಿದ್ದಾರೆ. "ಐಐಟಿಯನ್ ಆಗಿರುವುದು ಕೇವಲ ಒಂದು ಟ್ಯಾಗ್ ಅಲ್ಲ; ಅದು ಇಡೀ ಕುಟುಂಬಕ್ಕೆ ಗೌರವ ತರುತ್ತದೆ" ಎಂದು ಅವರು ಹೇಳಿದ್ದಾರೆ.
'ನನ್ನ ಏಕೈಕ ಮಗನನ್ನು ಕಳೆದುಕೊಂಡೆ'
ಐಐಟಿಗಳು ಉನ್ನತ ಮಟ್ಟದ ಶಿಕ್ಷಣ ಮತ್ತು ಹೆಚ್ಚಿನ ಸಂಬಳದ ಉದ್ಯೋಗಗಳಿಗೆ ಪ್ರಸಿದ್ಧವಾಗಿದ್ದರೂ, ಕ್ಯಾಂಪಸ್ ಜೀವನವು ಹೆಚ್ಚಾಗಿ ಒತ್ತಡ ಮತ್ತು ನಿರಂತರ ಸ್ಪರ್ಧೆಯಿಂದ ಕೂಡಿರುತ್ತದೆ. ಸಂಸ್ಥೆಗಳು ದಾಖಲೆ ಪ್ರಮಾಣದ ಪ್ಲೇಸ್ಮೆಂಟ್‌ಗಳನ್ನು ಪ್ರಚಾರ ಮಾಡುತ್ತವೆಯಾದರೂ, ಅನೇಕ ಪದವೀಧರರು ಉದ್ಯೋಗವಿಲ್ಲದೆ ಉಳಿಯುತ್ತಾರೆ. 2024ರ ದತ್ತಾಂಶ ಪ್ರಕಾರ, ಸುಮಾರು 38% ಐಐಟಿ ಪದವೀಧರರಿಗೆ ಉದ್ಯೋಗ ಸಿಕ್ಕಿಲ್ಲ.
ಸಿಂಗ್ ಪ್ರಕಾರ, ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಕೆಲಸ ಹುಡುಕಲು ಕಷ್ಟಪಡುತ್ತಾರೆ. ನಿರೀಕ್ಷೆಗಳು ಹೆಚ್ಚು. ಶೈಕ್ಷಣಿಕ ಒತ್ತಡ ಮತ್ತು ಉದ್ಯೋಗದ ಒತ್ತಡ ಸೇರಿ ಪರಿಸ್ಥಿತಿ ಗಂಭೀರವಾಗುತ್ತದೆ.
ಐಐಟಿ-ಕಾನ್ಪುರದ ಒಬ್ಬ ವಿದ್ಯಾರ್ಥಿ "ನನಗೆ ಕೆಲಸ ಸಿಗದೇ ಇದ್ದರೆ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತೇನೆ" ಎಂದು ಹೇಳಿದ್ದನ್ನು ಸಿಂಗ್ ನೆನಪಿಸಿಕೊಂಡರು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಆತ ಆತ್ಮಹತ್ಯೆ ಮಾಡಿಕೊಂಡನು ಎಂದು ಅವರು ಹೇಳಿದರು.
ಸರ್ಕಾರಿ ದತ್ತಾಂಶ ಮತ್ತು ವಿವಿಧ ಐಐಟಿಗಳ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ 160 ವಿದ್ಯಾರ್ಥಿಗಳ ಆತ್ಮಹತ್ಯೆ ದಾಖಲಾಗಿದೆ. ಅವುಗಳಲ್ಲಿ 69 ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ ಸಂಭವಿಸಿವೆ.
ದರ್ಶನ್ ಸೋಲಂಕಿ ಎಂಬ 20 ವರ್ಷದ ಪ್ರತಿಭಾವಂತ ಯುವಕ ಕೂಡಾ ಈ ಪಟ್ಟಿಯಲ್ಲಿ ಒಬ್ಬರು. 2022ರಲ್ಲಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾದ ದರ್ಶನ್, 2023ರಲ್ಲಿ ಐಐಟಿ-ಬಾಂಬೆನಲ್ಲಿ ರಾಸಾಯನಿಕ ಎಂಜಿನಿಯರಿಂಗ್‌ಗೆ ಸೇರಿದ್ದ.
ಅದು ತನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು ಎಂದು ತಂದೆ ರಮೇಶ್ ಸೋಲಂಕಿ ಹೇಳುತ್ತಾರೆ. "ಅಪ್ಪಾ, ನಾನು ಸಾಧಿಸಿದೆ. ಈಗ ನಮ್ಮ ಜೀವನ ಸುಲಭವಾಗುತ್ತದೆ" ಎಂದು ಮಗ ಹೇಳಿದ್ದ.
ಆದರೆ ಜಾತಿ ಆಧಾರಿತ ಅಪಹಾಸ್ಯ ಮತ್ತು ಶೈಕ್ಷಣಿಕ ಒತ್ತಡ ಅವನ ಮೇಲೆ ಪರಿಣಾಮ ಬೀರಿತು ಎಂದು ಕುಟುಂಬ ಆರೋಪಿಸಿದೆ.
"ನಾವು ಕೆಳ ಜಾತಿಗೆ ಸೇರಿದವರು. ಅದೇಕೆ ಮುಖ್ಯವಾಗಬೇಕು? ಅವಮಾನ ಮತ್ತು ಒತ್ತಡ ಎರಡನ್ನೂ ಅವನು ಹೇಗೆ ಸಹಿಸಬೇಕು?" ಎಂದು ರಮೇಶ್ ಪ್ರಶ್ನಿಸುತ್ತಾರೆ.
ಅಧಿಕಾರದ ಅಸಮತೋಲನ
ಪಿಎಚ್‌ಡಿ ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಕರ ನಡುವೆ ಅಧಿಕಾರದ ಅಸಮತೋಲನವಿದೆ ಎಂದು ತಜ್ಞರು ಸೂಚಿಸುತ್ತಾರೆ. ಫೆಲೋಶಿಪ್‌ಗಳು ಐದು ವರ್ಷಗಳ ನಂತರ ನಿಲ್ಲುತ್ತವೆ, ಇದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ.
ಐಐಟಿ-ಕಾನ್ಪುರದ ಪಿಎಚ್‌ಡಿ ವಿದ್ಯಾರ್ಥಿ ಸುಶಾಂತ್ (ಹೆಸರು ಬದಲಿಸಲಾಗಿದೆ) ಹೇಳುವಂತೆ, "ಪ್ರಬಂಧದ ಅನುಮೋದನೆ ಸಂಪೂರ್ಣವಾಗಿ ಮೇಲ್ವಿಚಾರಕರ ಕೈಯಲ್ಲಿರುತ್ತದೆ. ಇದು ವಿದ್ಯಾರ್ಥಿಗಳನ್ನು ಅವಲಂಬಿತರನ್ನಾಗಿ ಮಾಡುತ್ತದೆ. ಕೆಲವು ಮೇಲ್ವಿಚಾರಕರು ಟಾಕ್ಸಿಕ್ ಆಗಿರಬಹುದು."
ಏಳು ವರ್ಷಗಳಲ್ಲಿ ಪಿಎಚ್‌ಡಿ ಪೂರ್ಣಗೊಳಿಸದಿದ್ದರೆ ಪ್ರವೇಶ ರದ್ದು ಮಾಡುವ ನಿರ್ಧಾರವೂ ಒತ್ತಡ ಹೆಚ್ಚಿಸುತ್ತದೆ.
ಹೊಣೆಗಾರಿಕೆಯನ್ನು ಸರಿಪಡಿಸುವುದು
ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಎಸ್. ರವೀಂದ್ರ ಭಟ್ ನೇತೃತ್ವದ ರಾಷ್ಟ್ರೀಯ ಕಾರ್ಯಪಡೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದೆ.
"ಆತ್ಮಹತ್ಯೆ ಕೇವಲ ವೈಯಕ್ತಿಕ ಸಮಸ್ಯೆಯಲ್ಲ; ಇದು ಸಾಮಾಜಿಕ ಹಾಗೂ ಸಂಸ್ಥಾತ್ಮಕ ಸಮಸ್ಯೆಗಳ ಪರಿಣಾಮ" ಎಂದು ಅವರು ಹೇಳಿದ್ದಾರೆ.
ಸಂಸ್ಥೆಗಳು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಪರೀಕ್ಷೆಗಳ ಸಮಯದಲ್ಲಿ ಆತ್ಮಹತ್ಯೆಗಳ ಪ್ರಮಾಣ ಹೆಚ್ಚಿರುವುದರಿಂದ ತಜ್ಞರು ತಡೆಗಟ್ಟುವ ಕ್ರಮಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
ಐಐಟಿಗಳಲ್ಲಿ ಆತ್ಮಹತ್ಯೆಗಳನ್ನು ಸಕಾಲಿಕ ಹಸ್ತಕ್ಷೇಪದ ಮೂಲಕ ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮಾನಸಿಕ ಆರೋಗ್ಯ ಸಲಹೆಗಾರರ ಪ್ರಯತ್ನಗಳು ಸಾಕಾಗುತ್ತಿಲ್ಲ ಎಂದು ವೈದ್ಯೆ ಅಕ್ಸಾ ಶೇಖ್ ಹೇಳಿದ್ದಾರೆ.

