ಚಂಡೀಗಢ : ಮಧ್ಯಪ್ರಾಚ್ಯದ ಸಂಘರ್ಷದ ಪರಿಣಾಮ ದೇಶದ ಹಲವು ಭಾಗಗಳಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ ಎಲ್‌ಪಿಜಿ ಏಜೆನ್ಸಿ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಭೂಷಣ್ ಕುಮಾರ್ ಮಿತ್ತಲ್(66) ಮೃತರು. ಅವರು ಎಲ್‌ಪಿಜಿ ಏಜೆನ್ಸಿ ಮುಂದೆ ಸರದಿಯಲ್ಲಿ ನಿಂತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು The Indian Express ವರದಿ ಮಾಡಿದೆ.
ಭೂಷಣ್ ಕುಮಾರ್ ಅವರು ಬೆಳಿಗ್ಗೆ ಶೆಹ್ನಾ ಬ್ಲಾಕ್‌ನಲ್ಲಿರುವ ಎಲ್‌ಪಿಜಿ ವಿತರಣೆ ಕೇಂದ್ರಕ್ಕೆ ಗ್ಯಾಸ್ ಸಿಲಿಂಡರ್ ಪಡೆಯಲು ತೆರಳಿದ್ದರು. ಸುಮಾರು 8 ಗಂಟೆಯಿಂದಲೇ ಸಾಲಿನಲ್ಲಿ ನಿಂತಿದ್ದ ಅವರಿಗೆ ಟೋಕನ್ ಸಂಖ್ಯೆ ನೀಡಲಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಸರದಿಯಲ್ಲಿ ನಿಂತುಕೊಂಡಿದ್ದರಿಂದ ದಣಿದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ತಕ್ಷಣ
ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕ ವರದಿಗಳು ಭೂಷಣ್ ಕುಮಾರ್ ಅವರಿಗೆ ಹೃದಾಯಾಘಾತವಾಗಿರುವುದನ್ನು ದೃಢಪಡಿಸಿದೆ ಎಂದು ಮೂಲಗಳು ತಿಳಿಸಿದೆ.

